ಶಿವಮೊಗ್ಗ: ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿನ ನಿರಂತರ ಬೆಳವಣಿಗೆಯೊಂದಿಗೆ ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದೃಢ ಹೆಜ್ಜೆ ಇಡುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್, ಮಹಾತ್ಮ ಗಾಂಧೀಜಿ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರ ಹೋರಾಟ ಹಾಗೂ ತ್ಯಾಗವನ್ನು ಪ್ರತಿಯೊಬ್ಬ ಭಾರತೀಯರೂ ಗೌರವಿಸಬೇಕು ಎಂದು ಬಿ. ಗೋಪಿನಾಥ್ ಹೇಳಿದರು.
ಆರ್ಥಿಕ ಸುಧಾರಣೆಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ
ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಆರ್ಥಿಕ ಸುಧಾರಣೆಗಳ ಪರಿಣಾಮ ಭಾರತದ ಆರ್ಥಿಕತೆ ಜಾಗತಿಕ ಮಾರುಕಟ್ಟೆಯೊಂದಿಗೆ ಮತ್ತಷ್ಟು ಸಂಪರ್ಕ ಹೊಂದಿದೆ. ಹಸಿರು ಕ್ರಾಂತಿ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಅಳವಡಿಕೆಯಿಂದ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ಅವರು ವಿವರಿಸಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಯು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಪ್ರಮುಖ ಸ್ಥಾನಕ್ಕೇರಿಸಿದೆ. 2017ರಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಿಂದ ತೆರಿಗೆ ಸಂಗ್ರಹ ಹಾಗೂ ಸರ್ಕಾರದ ಆದಾಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಇದು ಸಹಕಾರಿಯಾಗಿದೆ ಎಂದರು.
ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಗತಿ
ಡಿಜಿಟಲ್ ಕ್ರಾಂತಿ, UPI, ಮೂಲಸೌಕರ್ಯ ಅಭಿವೃದ್ಧಿ, ಪರಮಾಣು ಶಕ್ತಿ, ಬಾಹ್ಯಾಕಾಶ ಸಂಶೋಧನೆ, ಜೈವಿಕ ತಂತ್ರಜ್ಞಾನ, ರಕ್ಷಣಾ ಕ್ಷೇತ್ರ, ಆರೋಗ್ಯ, ಶಿಕ್ಷಣ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಅದೇ ರೀತಿ ಮೇಕ್ ಇನ್ ಇಂಡಿಯಾ, ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳು (PLI), ಇ-ಕಾಮರ್ಸ್, ಕ್ವಿಕ್ ಕಾಮರ್ಸ್, ಆಹಾರ ವಿತರಣಾ ವೇದಿಕೆಗಳು ಹಾಗೂ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳ ಬೆಳವಣಿಗೆ ದೇಶದ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಿವೆ ಎಂದರು.
ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗುವತ್ತ ಭಾರತ
ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೇಗವಾಗಿ ಬೆಳೆಯುವ ಗುರಿಯನ್ನು ಹೊಂದಿದೆ. ದೇಶದ ಯೋಗ, ಆಯುರ್ವೇದ, ಸಿನಿಮಾ ಮತ್ತು ಸಾಂಸ್ಕೃತಿಕ ಪರಂಪರೆ ಕೂಡ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪ್ರಭಾವವನ್ನು ವಿಸ್ತರಿಸುತ್ತಿದೆ ಎಂದು ಬಿ. ಗೋಪಿನಾಥ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ. ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್. ಸುಕುಮಾರ್, ಖಜಾಂಚಿ ಆರ್. ಮನೋಹರ್, ನಿರ್ದೇಶಕರಾದ ಗಣೇಶ್ ಎಂ. ಅಂಗಡಿ, ಪ್ರದೀಪ್ ವಿ. ಎಲಿ, ವಿ.ಕೆ. ಜೈನ್, ಎಸ್.ಎಸ್. ಉದಯ್ ಕುಮಾರ್, ಎಸ್.ಪಿ. ಶಂಕರ್, ಬಿ.ವಿ. ಲಕ್ಷ್ಮೀ ಗೋಪಿನಾಥ್, ಸಹನ ಸುಭಾಷ್, ಆರ್. ಸುರೇಶ್ ಕುಮಾರ್, ಕೆ.ಎನ್. ರಾಜಶೇಖರ್, ವಿನೋದ್ ಕುಮಾರ್ ಗುಜ್ಜಾಡಿ, ರವಿಪ್ರಕಾಶ್ ಜನ್ನಿ ಸೇರಿದಂತೆ ಹಲವು ಪದಾಧಿಕಾರಿಗಳು, ಮಾಜಿ ಅಧ್ಯಕ್ಷರಾದ ಕೆ.ವಿ. ವಸಂತ್ ಕುಮಾರ್, ಡಿ.ಎಂ. ಶಂಕರಪ್ಪ, ಸಾಗರ ರಸ್ತೆ ಕೈಗಾರಿಕಾ ಸಂಘದ ಉಮೇಶ್ ಶಾಸ್ತ್ರಿ, ಡಿ.ಎಸ್. ನಟರಾಜ್, ದೇವರಾಜ್, ಪ್ರಶಾಂತ್ ಶಾಸ್ತ್ರಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಮಲಾಕ್ಷರಪ್ಪ, ಸಿಬ್ಬಂದಿ ಚೆನ್ನವೀರಪ್ಪ ಹಾಗೂ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.



More Stories
ಮಧ್ವಾಚಾರ್ಯರ ಜಯಂತಿ ಆದೇಶ ಸ್ವಾಗತ, ರಾಮಾನುಜ ಜಯಂತಿಗೂ ಆಗ್ರಹ
ದಸರಾ ಮಹಿಳಾ ಸದೃಢತೆ, ಸಮನ್ವಯತೆ, ಸಮೃದ್ಧಿಯ ಪ್ರತೀಕ: ಶ್ರೀರಂಜಿನಿ
ನಕ್ಷತ್ರಗಳ ಪ್ರಪಂಚ ವಿಚಿತ್ರ, ಕುತೂಹಲಕಾರಿ: ಪ್ರೊ. ಶಂಕರನಾರಾಯಣ ಶಾಸ್ತ್ರಿ