ಶಿವಮೊಗ್ಗ, ಸೆಪ್ಟೆಂಬರ್ 04: ಖಾಕಿ ಸಮವಸ್ತ್ರ ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಾತ್ರವಲ್ಲ, ಸಂಕಷ್ಟದಲ್ಲಿರುವ ಸಾರ್ವಜನಿಕರ ನೆರವಿಗೆ ಧಾವಿಸುವುದಕ್ಕೂ ಸೈ ಸೈ ಎಂಬುದನ್ನು ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಅರವಿಂದ್ ಸಾಬೀತುಪಡಿಸಿದ್ದಾರೆ.
ನಗರದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಪ್ಲೇಟ್ಲೆಟ್ಸ್ (Single Donor Platelets – SDP) ಅಗತ್ಯವಿತ್ತು. ರೋಗಿಯ ಕುಟುಂಬಸ್ಥರು ರಕ್ತದಾನಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆಯೇ, ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಅರವಿಂದ್ ಅವರು ತಕ್ಷಣ ಸ್ಪಂದಿಸಿ ಸ್ವಯಂಪ್ರೇರಿತರಾಗಿ ನೆರವಿಗೆ ಬಂದಿದ್ದಾರೆ.
ಸಾಮಾನ್ಯ ರಕ್ತದಾನಕ್ಕಿಂತ SDP (ಪ್ಲೇಟ್ಲೆಟ್ಸ್) ದಾನ ಪ್ರಕ್ರಿಯೆಯು ಹೆಚ್ಚು ಸಮಯ ಹಾಗೂ ತಾಳ್ಮೆಯನ್ನು ಬಯಸುತ್ತದೆ. ಆದರೂ ರೋಗಿಯ ಜೀವ ಉಳಿಸುವ ತುರ್ತು ಅಗತ್ಯವನ್ನು ಅರಿತ ಅರವಿಂದ್, ಯಾವುದೇ ಹಿಂಜರಿಕೆಯಿಲ್ಲದೆ ಆಸ್ಪತ್ರೆಗೆ ತೆರಳಿ ತಮ್ಮ ಮೊದಲ SDP ದಾನ ಮಾಡುವ ಮೂಲಕ ರೋಗಿಗೆ ಜೀವದಾನ ಮಾಡಿದ್ದಾರೆ.
ಅರವಿಂದ್ ಅವರ ಈ ಸಮಯೋಚಿತ ಹಾಗೂ ಮಾನವೀಯ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ. ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅರವಿಂದ್ ಅವರಿಗೆ “ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿ ಅಭಿನಂದಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಈ ಶ್ಲಾಘನೀಯ ನಡೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
Aravind, a staff member of the Shivamogga Cyber Police Station, displayed exemplary humanity by voluntarily donating Single Donor Platelets (SDP) to save a critical patient at Nanjappa Life Care Hospital. The Shivamogga District Police praised his noble gesture on their official social media handles, earning wide appreciation from the public.



More Stories
ಆಶ್ರಯ ಮನೆ ವಿಳಂಬ: ಪಾಲಿಕೆಗೆ ಮುತ್ತಿಗೆ, ಈಶ್ವರಪ್ಪ ಪೊಲೀಸ್ ವಶಕ್ಕೆ
ಕೋಣಂದೂರು ರೋಟರಿಯಿಂದ ಉಚಿತ ಶ್ರವಣ ತಪಾಸಣೆ: 5 ಜನರಿಗೆ ಶ್ರವಣ ಯಂತ್ರ
ರೇಡಿಯೋ ಶಿವಮೊಗ್ಗ 90.8 FM: ರಾಜ್ಯೋತ್ಸವಕ್ಕೆ 24 ಗಂಟೆ ನೇರಪ್ರಸಾರ