ರಾಜ್ಯದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದಲ್ಲಿ ಜಾರಿಯಲ್ಲಿರುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಹಣಕಾಸು ಅಕ್ರಮಗಳು ನಡೆಯುತ್ತಿದ್ದು, ಇದು ರಾಜ್ಯದ ಕೆಪಿಎಸ್ಸಿ (KPSC) ಹಗರಣಕ್ಕಿಂತಲೂ ದೊಡ್ಡ ಮಟ್ಟದ ದುರಂತವಾಗಿದೆ. ಈ ಕೂಡಲೇ ಈ ಹಗರಣದ ಕುರಿತು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಿಐಡಿ (CID) ತನಿಖೆಗೆ ಆದೇಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ (MLC) ಡಿ.ಎಸ್. ಅರುಣ್ ಆಗ್ರಹಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಮೌಲ್ಯಮಾಪನದ ಹೆಸರಿನಲ್ಲಿ ಬೃಹತ್ ಷಡ್ಯಂತ್ರ ಹಾಗೂ ಭ್ರಷ್ಟಾಚಾರ ಸಾಗುತ್ತಿದೆ. ಪ್ರಸಕ್ತ ಸೆಮಿಸ್ಟರ್ನಿಂದಲೇ ಈ ಲೋಪಪೂರಿತ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ತಕ್ಷಣವೇ ಕೈಬಿಡಬೇಕು. ರಾಜ್ಯದ ಮತ್ತಾವ ವಿಶ್ವವಿದ್ಯಾಲಯಗಳಲ್ಲೂ ಜಾರಿಯಲ್ಲಿಲ್ಲದ ಈ ವ್ಯವಸ್ಥೆಯನ್ನು ಕುವೆಂಪು ವಿವಿಯಲ್ಲಿ ಮಾತ್ರ ಏಕೆ ತುರ್ತಾಗಿ ಅಳವಡಿಸಲಾಯಿತು? ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆಯೇ ಹೊರತು ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ನೀಡದ ವಿವಿ, ಎಂಎಲ್ಸಿಗೆ ಮಾನನಷ್ಟ ಬೆದರಿಕೆ: “ಡಿಜಿಟಲ್ ಮೌಲ್ಯಮಾಪನದಲ್ಲಿನ ಗೊಂದಲಗಳು ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ಕೋರಿ ಮೂರೂವರೆ ತಿಂಗಳುಗಳೇ ಕಳೆದರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಸೆಪ್ಟೆಂಬರ್ 30ಕ್ಕೆ ನಿಗದಿಯಾಗಿದ್ದ ಸಿಂಡಿಕೇಟ್ ಸಭೆಯನ್ನು ಹಿಂದಿನ ದಿನ ಸಂಜೆ ಏಕಾಏಕಿ ಮುಂದೂಡಿದ್ದರ ಹಿಂದೆ ಯಾವ ರಹಸ್ಯ ಅಡಗಿದೆ?” ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ, ಈ ಭ್ರಷ್ಟಾಚಾರದ ಕುರಿತು ಧ್ವನಿ ಎತ್ತಿದ್ದಕ್ಕೆ ಸ್ವತಃ ಕುಲಪತಿಗಳೇ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನಿಯಮ ಬಾಹಿರ ಟೆಂಡರ್ ಹಾಗೂ ಮೂಲಸೌಕರ್ಯಗಳ ಅಭಾವ: ವಿವಿಯ ಅಂದಿನ ಪ್ರಭಾರ ಕುಲಸಚಿವ ಹೇಮಂತ್ ಅವರು ರಚಿಸಿದ್ದ ಮೂವರ ಸದಸ್ಯರ ತನಿಖಾ ಸಮಿತಿ ಈಗಾಗಲೇ ವರದಿ ಸಿದ್ಧಪಡಿಸಿದೆ. ನಿಯಮಾವಳಿ ಪ್ರಕಾರ ಎರಡು ವರ್ಷಗಳ ಅವಧಿಗೆ ನೀಡಬೇಕಿದ್ದ ಟೆಂಡರ್ ಅನ್ನು ಖಾಸಗಿ ಕಂಪನಿಯೊಂದಕ್ಕೆ ನಿಯಮ ಬಾಹಿರವಾಗಿ ಬರೋಬ್ಬರಿ ಆರು ವರ್ಷಗಳಿಗೆ ವಿಸ್ತರಿಸಿ ನೀಡಲಾಗಿದೆ. ಒಪ್ಪಂದದಂತೆ ಕಂಪನಿಯು ಮೌಲ್ಯಮಾಪಕರಿಗೆ ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್ ಸೇರಿದಂತೆ ಅಗತ್ಯ ತಾಂತ್ರಿಕ ಸೌಲಭ್ಯ ಒದಗಿಸಬೇಕಿತ್ತು. ಆದರೆ ಯಾವುದೇ ಸೌಲಭ್ಯ ನೀಡದಿರುವುದರಿಂದ ಉಪನ್ಯಾಸಕರು ಎಲ್ಲೆಂದರಲ್ಲಿ ಮೌಲ್ಯಮಾಪನ ಮಾಡುತ್ತಿದ್ದು, ಉತ್ತರ ಪತ್ರಿಕೆಗಳ ಗೌಪ್ಯತೆ ಮತ್ತು ಪವಿತ್ರತೆ ಸಂಪೂರ್ಣ ಹಾಳಾಗಿದೆ ಎಂದರು.
ಅಂಕ ತಿದ್ದುಪಡಿ ಜಾಲ: ₹50 ಸಾವಿರಕ್ಕೆ 5 ವಿಷಯಗಳ ಡೀಲ್! ಅಂಕಪಟ್ಟಿ ಸಿದ್ಧಪಡಿಸಲು ಡಿಜಿಟಲ್ ವ್ಯವಸ್ಥೆ ಇದ್ದರೂ, ಯುಯುಸಿಎಂಎಸ್ (UUCMS) ತಂತ್ರಾಂಶಕ್ಕೆ ಅಂಕಗಳನ್ನು ನಮೂದಿಸುವಾಗ ಮ್ಯಾನುಯಲ್ ವ್ಯವಸ್ಥೆ ಬಳಸಿ ಅಕ್ರಮ ಎಸಗಲಾಗುತ್ತಿದೆ. ಸ್ಕ್ಯಾನಿಂಗ್ ಗುಣಮಟ್ಟ ಕಳಪೆಯಾಗಿದ್ದು, ಓದಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಔಟ್ಸೋರ್ಸ್ ಸಿಬ್ಬಂದಿಯೊಬ್ಬರ ವಿರುದ್ಧ ಅಕ್ರಮವಾಗಿ ಅಂಕ ಹೆಚ್ಚಿಸಿದ ಆರೋಪದ ಮೇಲೆ ಎಫ್ಐಆರ್ (FIR) ದಾಖಲಾಗಿದೆ. ಪ್ರಸ್ತುತ ಈ ಪ್ರಕರಣ ಜಯನಗರ ಠಾಣೆಗೆ ವರ್ಗಾವಣೆಯಾಗಿದ್ದು ತನಿಖೆ ನಡೆಯುತ್ತಿದೆ. ಒಂದು ವಿಷಯಕ್ಕೆ 10 ಸಾವಿರ ರೂ. ಹಾಗೂ 5 ವಿಷಯಗಳಿಗೆ 50 ಸಾವಿರ ರೂ. ಲಂಚ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ರಾಜ್ಯಪಾಲರಿಗೆ ದೂರು, ಶೋಕಾಸ್ ನೋಟಿಸ್: ಈ ಎಲ್ಲಾ ಅಕ್ರಮಗಳ ವಿರುದ್ಧ ಈಗಾಗಲೇ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದ್ದು, ಅವರು ಕುಲಪತಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಎಸ್. ದತ್ತಾತ್ರಿ, ಸಿ.ಎಚ್. ಮಾಲತೇಶ್, ಮಂಜುನಾಥ್ ಎನ್., ಚಂದ್ರಶೇಖರ್ ಹಾಗೂ ಈಶ್ವರಪ್ಪ ಉಪಸ್ಥಿತರಿದ್ದರು.
ವಿವಿ ಖಜಾನೆ ಖಾಲಿ; ಅತಿಥಿ ಉಪನ್ಯಾಸಕರಿಗೆ ಸಂಕಷ್ಟ: “ಕುವೆಂಪು ವಿವಿ ಪರೀಕ್ಷಾ ಶುಲ್ಕವಾಗಿ ಬರೋಬ್ಬರಿ 7.6 ಕೋಟಿ ರೂ. ಸಂಗ್ರಹಿಸಿದೆ. ಮ್ಯಾನುಯಲ್ ಮೌಲ್ಯಮಾಪನಕ್ಕಿಂತ ಡಿಜಿಟಲ್ ಮೌಲ್ಯಮಾಪನಕ್ಕೆ ವರ್ಷಕ್ಕೆ ಹೆಚ್ಚುವರಿಯಾಗಿ 2.94 ಕೋಟಿ ರೂ. ವೆಚ್ಚ ಮಾಡುತ್ತಿದೆ. 2025ಕ್ಕೆ ವಿವಿ ವಿವಿಧ ಬಾಬತ್ತುಗಳಿಂದ 20.15 ಕೋಟಿ ರೂ. ಸಂಗ್ರಹಿಸಿದ್ದು, 2024-25 ಸಾಲಿನಲ್ಲಿ 13.12 ಕೋಟಿ ರೂ. ವೆಚ್ಚ ಮಾಡಿದೆ. ಆದರೆ, ವಿವಿಯ ಬೋಧನೆಗೆ ಆಸರೆಯಾಗಿರುವ ಅತಿಥಿ ಉಪನ್ಯಾಸಕರಿಗೆ ಕಳೆದ 4 ತಿಂಗಳಿಂದ ವೇತನ ನೀಡಲು ವಿವಿ ಬಳಿ ಹಣವಿಲ್ಲದಿರುವುದು ದುರಂತ.” — ಡಿ.ಎಸ್. ಅರುಣ್, ವಿಧಾನ ಪರಿಷತ್ ಸದಸ್ಯ
ಸಂವಿಧಾನಾತ್ಮಕ ಸಂಸ್ಥೆಯನ್ನೇ ಎಸ್ಐಆರ್ ವಿರೋಧಿಸಿ ಧರಣಿ ನಡೆಸುವುದು ಖಂಡನೀಯ: “ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ತಮ್ಮ ಸಂವಿಧಾನಾತ್ಮಕ ಅಧಿಕಾರ ಮೀರಿ ರಾಜ್ಯ ಚುನಾವಣೆ ಆಯೋಗದ ಮುಂದೆ ಎಸ್ಐಆರ್ ವಿರೋಧಿಸಿ ಧರಣಿ ನಡೆಸಿರುವುದು ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ. ಇದು ಆಯೋಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಯತ್ನವಾಗಿದೆ. ಕಳೆದ 12 ವರ್ಷಗಳಿಂದ ಅನುಭವಿಸುತ್ತಿರುವ ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರು ಇಂತಹ ಕೃತ್ಯಕ್ಕೆ ಇಳಿದಿದ್ದಾರೆ.” — ಎಸ್. ದತ್ತಾತ್ರಿ, ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ
MLC D.S. Arun has demanded a CID investigation into the alleged large-scale financial irregularities in the digital evaluation system at Kuvempu University. Addressing a press conference in Shivamogga, he accused the university of issuing irregular tenders and enabling marks manipulation, urging the government to immediately halt the digital evaluation process.
More Stories
ಶಿವಮೊಗ್ಗ ಬಿಜೆಪಿ ಭದ್ರಕೋಟೆಗೆ ಯೋಗೀಶ್ ಸವಾಲು: ತಂದೆಯ ಕನಸಿನಂತೆ ಶಾಸಕ ಸ್ಥಾನದತ್ತ ಹೆಚ್.ಸಿ. ಯೋಗೀಶ್!
ಸಚಿವ ಮಧು ಬಂಗಾರಪ್ಪ ಭಾವುಕ :ಮಾಜಿ ಶಾಸಕ ದಿವಂಗತ ಹೆಚ್.ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ
24 ವರ್ಷಗಳ ಯಶಸ್ವಿ ಸೇನಾ ಸೇವೆ: ತವರಿಗೆ ಮರಳಿದ ಶಿವಮೊಗ್ಗದ ಇಬ್ಬರು ಧೀರ ಯೋಧರಿಗೆ ಅದ್ಧೂರಿ ಸ್ವಾಗತ!