ಮೈಸೂರು : Ai-ವಾರ್ತಾ, ಅಕ್ಟೋಬರ್ 07
ಭಾರತೀಯ ಹಬ್ಬಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ. ಇಂದಿನ ಯುವ ಪೀಳಿಗೆಗೆ ಇದರ ಪರಿಚಯವನ್ನು ಮಾಡುವುದು ಅತೀ ಅಗತ್ಯ ಹಾಗೂ ಭಾರತೀಯರಿಗೆ ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಹೆಮ್ಮೆಯನ್ನು ಹೊಂದುವಂತಹ ಒಂದು ಸುವರ್ಣಾವಕಾಶವಾಗಿದೆ. “ದಸರಾ” ಭಾರತದ ಪ್ರಮುಖ ಪಾರಂಪರಿಕ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿ ಮತ್ತು ವಿಜಯದಶಮಿಯನ್ನು ಒಳಗೊಂಡ ಹತ್ತು ದಿನಗಳ ಈ ಉತ್ಸವವು ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದೆ. ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ “ಮೈಸೂರು ದಸರಾ” ಆಚರಣೆಯ ವೈಶಿಷ್ಟ್ಯವನ್ನು ಗಮನಿಸಿ, 2008ರಲ್ಲಿ ಯುನೆಸ್ಕೋ ದಸರಾ ಆಚರಣೆಯ ಕಲಾಪ್ರಕಾರಗಳನ್ನು ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ಗುರುತಿಸಿದೆ.

ಪ್ರಾಚೀನ ಕಾಲದ ದಸರಾ ವೈಭವ: ಶರದೃತುವಿನಲ್ಲಿ ಆಚರಿಸಲಾಗುವ ನವರಾತ್ರಿಯು ದೇವಿಯ ವಿವಿಧ ರೂಪಗಳ ಆರಾಧನೆಗೆ ಸಮರ್ಪಿತವಾಗಿದ್ದು, ವಿಜಯದಶಮಿಯನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ದುಷ್ಟಶಕ್ತಿಯ ಮೇಲೆ ಸತ್ಕಾರ್ಯ ಮತ್ತು ಧರ್ಮದ ವಿಜಯವೇ ಇದರ ಪ್ರಮುಖ ಸಂದೇಶ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತಿದ್ದರೂ, ಮೈಸೂರು ದಸರಾ ತನ್ನ ವಿಶಿಷ್ಟ ಪರಂಪರೆ, ರಾಜವೈಭವ ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ವಿಶ್ವಪ್ರಸಿದ್ಧವಾಗಿದೆ.

ನವರಾತ್ರಿ ಮತ್ತು ದೇವಿ ಆರಾಧನೆ: ಪುರಾಣಗಳಲ್ಲಿ ಮಹಿಷಾಸುರನಂತಹ ಅಸುರ ಶಕ್ತಿಗಳ ವಿರುದ್ಧ ಚಾಮುಂಡೇಶ್ವರಿ ದೇವಿಯ ವಿಜಯದ ಕಥೆಗಳು ನವರಾತ್ರಿ ಆಚರಣೆಯೊಂದಿಗೆ ಸಂಬಂಧ ಹೊಂದಿವೆ. ಅಸುರರ ಸಂಹಾರದ ಮೂಲಕ ಧರ್ಮ ಮತ್ತು ಸತ್ಯದ ವಿಜಯವನ್ನು ಸಂಭ್ರಮಿಸಲಾಗುತ್ತದೆ. ಮೈಸೂರು ದಸರೆಯಲ್ಲಿ ಚಾಮುಂಡೇಶ್ವರಿ ದೇವಿಯ ಆರಾಧನೆಗೆ ವಿಶೇಷ ಸ್ಥಾನವಿದೆ.
ಪ್ರಕೃತಿಯನ್ನು ಮಾತೃಸ್ವರೂಪವಾಗಿ ಕಾಣುವ ಭಾರತೀಯ ಪರಂಪರೆಯಲ್ಲಿ ಶಕ್ತಿಯನ್ನು ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ನವರೂಪಗಳಲ್ಲಿ ಆರಾಧಿಸಲಾಗುತ್ತದೆ.
ಘಟಸ್ಥಾಪನೆ, ದೇವಿ ಪೂಜೆ, ಸರಸ್ವತಿ ಪೂಜೆ, ದುರ್ಗಾಷ್ಟಮಿ, ಆಯುಧ ಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ಈ ಅವಧಿಯಲ್ಲಿ ನಡೆಯುತ್ತವೆ. ಹತ್ತನೆಯ ದಿನವಾದ ವಿಜಯದಶಮಿಯು ವಿಜಯಲಕ್ಷ್ಮಿ ಅಥವಾ ಅಪರಾಜಿತಾ ದೇವಿಯ ಆರಾಧನೆಯನ್ನು ನಡೆಸಲಾಗುತ್ತದೆ. ನವರಾತ್ರಿಯ ಒಂಭತ್ತು ದಿನಗಳು ದೇವಿಯ ಒಂಭತ್ತು ವಿವಿಧ ಬಣ್ಣಗಳನ್ನು ಸಂಕೇತಿಸುತ್ತವೆ. ದಿನ-1 ಕಿತ್ತಳೆ, ದಿನ-2 ಬಿಳಿ, ದಿನ-3 ಕೆಂಪು, ದಿನ-4 ಕಡುನೀಲಿ, ದಿನ-5 ಹಳದಿ, ದಿನ-6 ಹಸಿರು, ದಿನ-7 ಬೂದು, ದಿನ-8 ನೇರಳೆ, ದಿನ-9 ನವಿಲು ಹಸಿರು ಬಣ್ಣಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಅಲ್ಲದೇ, ಹೆಣ್ಣುಮಕ್ಕಳೂ ಸಹ ನವರಾತ್ರಿಯ ಪ್ರತಿದಿನವೂ ಅದೇ ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸುತ್ತಾರೆ.
ವಿಜಯದಶಮಿಗೆ ರಾಮಾಯಣದ ಹಿನ್ನೆಲೆಯೂ ಇದೆ. ಶ್ರೀರಾಮನು ರಾವಣನನ್ನು ಸಂಹರಿಸಿದ ದಿನವೆಂದು ಇದನ್ನು ಆಚರಿಸುವ ಸಂಪ್ರದಾಯವಿದೆ. ಹೀಗಾಗಿ ದಸರಾ ದೇವಿಯ ವಿಜಯ ಮತ್ತು ಶ್ರೀರಾಮನ ವಿಜಯ ಎರಡನ್ನೂ ಪ್ರತಿನಿಧಿಸುವ ಮಹತ್ವದ ಹಬ್ಬವಾಗಿದೆ.

ಐತಿಹಾಸಿಕ ಹಿನ್ನೆಲೆ: ಮೈಸೂರು ದಸರೆಯ ಇತಿಹಾಸ ಅತ್ಯಂತ ಪ್ರಾಚೀನವಾಗಿದೆ. ಭಾರತದ ವಿವಿಧ ರಾಜವಂಶಗಳ ಕಾಲದಲ್ಲಿಯೇ ದುರ್ಗಾ ಮತ್ತು ಮಹಿಷಮರ್ದಿನಿಯ ಆರಾಧನೆಯ ಶಿಲ್ಪಗಳು ಕಂಡುಬರುವುದರಿಂದ ದಸರಾ ಆಚರಣೆಯು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿ ಪರಿಗಣಿಸಲಾಗಿದೆ. ಶ್ರೀರಂಗಪಟ್ಟಣದ ಪತನದ ನಂತರ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1799ರಲ್ಲಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಮರುಚಾಲನೆ ನೀಡಿದರು.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದಸರಾ ಉತ್ಸವವು ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಇಂದಿನ ಮೈಸೂರು ದಸರಾ ವಿಜಯನಗರದ ಈ ಪರಂಪರೆಯ ಮುಂದುವರಿದ ರೂಪವಾಗಿದೆ.

ಮೈಸೂರು ಒಡೆಯರ ಕಾಲದ ದಸರಾ ವೈಭವ: ಮೈಸೂರು ಅರಸರಾದ ಶ್ರೀ ರಾಜ ಒಡೆಯರ್ ಅವರು ಸಾ.ಶ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಹತ್ತು ದಿನಗಳ ದಸರಾ ಉತ್ಸವವನ್ನು ಆರಂಭಿಸಿದರು. ನಂತರ ಮೈಸೂರು ಒಡೆಯರ ಆಡಳಿತದಲ್ಲಿ ದಸರಾ ಉತ್ಸವವು ರಾಜವೈಭವದ ಪ್ರಮುಖ ಸಂಕೇತವಾಗಿ ಬೆಳೆಯಿತು.
1648ರಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಕಾಲದ ದಸರಾ ಆಚರಣೆಗಳ ವಿವರಗಳನ್ನು ಕವಿ ಗೋವಿಂದವೈದ್ಯರು ತಮ್ಮ ‘ಕಂಠೀರವ ನರಸರಾಜ ವಿಜಯ’ ಕೃತಿಯಲ್ಲಿ ದಾಖಲಿಸಿದ್ದಾರೆ. ಆ ಕಾಲದಲ್ಲಿ ದೇವಿ ಆರಾಧನೆ, ಆಯುಧ ಪೂಜೆ, ರಾಜದರ್ಬಾರ್, ಮಲ್ಲಯುದ್ಧ, ನೃತ್ಯ, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರೆಯ ಪ್ರಮುಖ ಭಾಗವಾಗಿದ್ದವು.
ಮೈಸೂರು ಒಡೆಯರ ಕಾಲದಲ್ಲಿ ದಸರಾ ರಾಜಮನೆತನದ ಪ್ರಮುಖ ಉತ್ಸವವಾಗಿತ್ತು. ನವರಾತ್ರಿಯ ಸಂದರ್ಭದಲ್ಲಿ ರಾಜರು ಕುಲದೇವತೆ ಹಾಗೂ ಇತರ ದೇವತೆಗಳನ್ನು ಪೂಜಿಸಿ, ಪಟ್ಟದ ಆನೆ ಮತ್ತು ಕುದುರೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ರಾಜದರ್ಬಾರ್, ಆಯುಧ ಪೂಜೆ ಮತ್ತು ವಿಜಯದಶಮಿ ಮೆರವಣಿಗೆಗಳು ಪ್ರಮುಖ ಕಾರ್ಯಕ್ರಮಗಳಾಗಿದ್ದವು.
ಮಹಾನವಮಿಯಂದು ಪಟ್ಟದ ಕತ್ತಿ ಸೇರಿದಂತೆ ರಾಜವಂಶದ ಆಯುಧಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ರಾಜದರ್ಬಾರ್, ಮಲ್ಲಯುದ್ಧ, ಸಂಗೀತ, ನೃತ್ಯ, ಬಾಣಬಿರುಸು ಮತ್ತು ವಿವಿಧ ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ದಸರೆಯ ಭಾಗವಾಗಿದ್ದವು. ಕಾಲ ಬದಲಾದಂತೆ ಅವುಗಳಲ್ಲಿ ಹಲವು ರೂಪಾಂತರಗೊಂಡಿದ್ದರೂ, ದಸರೆಯ ಮೂಲ ಪರಂಪರೆ ಇಂದಿಗೂ ಮುಂದುವರಿದಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆಚರಣೆ ವಿಶೇಷ ವೈಭವವನ್ನು ಪಡೆದಿತ್ತು. ಮಹಾನವಮಿಯಂದು ಕತ್ತಿ, ಖಡ್ಗ ಸೇರಿದಂತೆ ರಾಜವಂಶದ ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ವಿಜಯದಶಮಿಯಂದು ರಾಜರು ರಾಜಪೋಷಾಕಿನಲ್ಲಿ ಖಡ್ಗ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಆ ಕಾಲದಲ್ಲಿ ಇಂದಿನಂತೆ ಚಿನ್ನದ ಅಂಬಾರಿಯಲ್ಲಿ ರಾಜರು ಸಂಚರಿಸುತ್ತಿರಲಿಲ್ಲ. ಆನೆಗಳು ಎಳೆಯುವ ಬೆಳ್ಳಿಯ ರಥದಲ್ಲಿ ಮಹಾರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ನಂತರ ಕುದುರೆಯೇರಿ ಸೈನ್ಯ ವೀಕ್ಷಿಸಿ, ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಇತ್ತು.

ಚಾಮುಂಡಿ ಬೆಟ್ಟದ ವಿಶೇಷತೆ: ಮೈಸೂರು ದಸರೆಯ ಧಾರ್ಮಿಕ ಹಿನ್ನೆಲೆಯ ಪ್ರಮುಖ ಕೇಂದ್ರ ಚಾಮುಂಡಿ ಬೆಟ್ಟ. ನವರಾತ್ರಿಯ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರತಿದಿನ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲಾಗುತ್ತದೆ.
ದೇವಿಯನ್ನು ವಿವಿಧ ಶಕ್ತಿರೂಪಗಳಲ್ಲಿ ಅಲಂಕರಿಸುವ ಸಂಪ್ರದಾಯವಿದೆ. ನವರಾತ್ರಿಯ ಹತ್ತು ದಿನಗಳ ಅವಧಿಯಲ್ಲಿ ದೇವಿಯ ವಿವಿಧ ಅಲಂಕಾರಗಳು ಭಕ್ತರನ್ನು ಆಕರ್ಷಿಸುತ್ತವೆ. ವಿಜಯದಶಮಿಯಂದು ದೇವಿಯನ್ನು ಅಪರಾಜಿತೆಯ ರೂಪದಲ್ಲಿ ಆರಾಧಿಸಲಾಗುತ್ತದೆ.
ನವರಾತ್ರಿಯ ಮತ್ತೊಂದು ವಿಶೇಷ ಆಚರಣೆ ಕುಮಾರಿ ಪೂಜೆ. 2-10 ವಯಸ್ಸಿನ ಬಾಲಕಿಯರನ್ನು ದೇವಿಯ ವಿವಿಧ ರೂಪಗಳ ಪ್ರತೀಕವಾಗಿ ಪೂಜಿಸುವ ಸಂಪ್ರದಾಯವೂ ಕೆಲವು ಕಡೆಗಳಲ್ಲಿ ಕಂಡುಬರುತ್ತದೆ.

ಅರಮನೆಯ ಪ್ರಮುಖ ಆಕರ್ಷಣೆ – ರತ್ನಖಚಿತ ಚಿನ್ನದ ಸಿಂಹಾಸನ: ಮೈಸೂರು ಸಂಸ್ಥಾನದಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ರತ್ನಖಚಿತ ಚಿನ್ನದ ಸಿಂಹಾಸನವಾಗಿದೆ. ಇದು ರತ್ನಖಚಿತ ಚಿನ್ನದ ಸಿಂಹಾಸನವಾಗಿದ್ದು ಇದಕ್ಕೆ ಅದರದೇ ಆದ ಇತಿಹಾಸವಿದೆ. ದಸರಾ ಸಂದರ್ಭಗಳಲ್ಲಿ ಮಾತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಲಭ್ಯವಿದ್ದು, ಈ ಚಿನ್ನದ ಸಿಂಹಾಸನವು ದಸರಾ ಮುಂಚೆ ಒಂದು ಶುಭ ಮುಹೂರ್ತದಲ್ಲಿ ಖಾಸಗಿ ದರ್ಬಾರ್ ಹಾಲಿನಲ್ಲಿ ಜೋಡಣೆ ಮಾಡಲಾಗುತ್ತದೆ. ಸುಮಾರು 30 ರಿಂದ 40 ದಿನಗಳ ಕಾಲ ವೀಕ್ಷಣೆ ಮಾಡಬಹುದಾಗಿದೆ.
ಈ ಚಿನ್ನದ ಸಿಂಹಾಸನದಲ್ಲಿ ಹಲವು ವೈಶಿಷ್ಟ್ಯಗಳು ಕೂಡಿದ್ದು, ಈ ಚಿನ್ನದ ಸಿಂಹಾಸನ ಬೆಳ್ಳಿಯ ಮೆಟ್ಟಿಲು ಹೊಂದಿದ್ದು ಎರಡು ಬದಿಯಲ್ಲಿ ದರ್ಪಣ ಸುಂದರಿಯರು ಇದ್ದು, ಮಹಾರಾಜರಿಗೆ ಸ್ವಾಗತ ಮಾಡುವ ಭಂಗಿಯಲ್ಲಿ ನಿಂತಿರುವ ಹಾಗೆ ರೂಪಿಸಲಾಗಿದೆ. ಇನ್ನು ಈ ಚಿನ್ನದ ಸಿಂಹಾಸನದ ಮೇಲ್ಬಾಗದಲ್ಲಿ ಚಿನ್ನದ ಛಾಮರ ಹೊಂದಿದ್ದು ಅದಕ್ಕೆ ಮಯೂರ ಪಕ್ಷಿಯನ್ನು ಜೋಡಿಸಲಾಗಿದೆ. ಸುತ್ತಲು ಮುತ್ತುಗಳಿಂದ ಅಲಂಕೃತವಾಗಿದೆ. ಇನ್ನು ಸಿಂಹಾಸನದ ಹಿಂಭಾಗದ ಮೇಲ್ಬಾಗದಲ್ಲಿ ಲಕ್ಷ್ಮಿ, ಚಾಮುಂಡೇಶ್ವರಿ ಮತ್ತು ಸರಸ್ವತಿಯ ಮೂರ್ತಿ ಇದ್ದು, ತಳಭಾಗದಲ್ಲಿ ವಿಜಯದಶಮಿಯ ದಿನ ಸಿಂಹಾಸನಕ್ಕೆ ರಾಜವಂಶಸ್ಥರಿಂದ ಹೋಮ ಹವನ ನಡೆಸಿ ಸಿಂಹವನ್ನು ಜೋಡಿಸುತ್ತಾರೆ.
“ಸ್ವರ್ಣಕಲಾನಿಪುಣ” ಸಿಂಗಣ್ಣಾಚಾರ್ಯ ಈ ಸಿಂಹಾಸನವನ್ನು ಚಿನ್ನಾಭರಣಗಳು, ಬೆಲೆಬಾಳುವ ರತ್ನಗಳು ಮತ್ತು ಬೆಳ್ಳಿಯ ಪ್ರತಿಮೆಗಳಿಂದ ಶೃಂಗರಿಸಿದ್ದಾರೆ. ಕಾಲಕ್ರಮೇಣ ಇದಕ್ಕೆ ಚಿನ್ನದ ಹಾಳೆಗಳು, ನವರತ್ನಗಳು ಮತ್ತು ಕಲಾತ್ಮಕ ಅಲಂಕಾರಗಳನ್ನು ಅಳವಡಿಸಿ ಭವ್ಯರೂಪ ನೀಡಲಾಗಿದೆ.

ವಿದ್ಯುತ್ ದೀಪಾಲಂಕಾರ: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ವತಿಯಿಂದ ಮೈಸೂರು ನಗರದಲ್ಲಿ ಸುಮಾರು 130 ರಿಂದ 136 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈವಿಧ್ಯಮಯ ಹಾಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
ಇಡೀ ಮೈಸೂರು ನಗರವನ್ನು ಕಂಗೊಳಿಸುವಂತೆ ಮಾಡುವ ಈ ದೀಪಾಲಂಕಾರವು ನಗರದ ಸುಮಾರು 118 ಪ್ರಮುಖ ವೃತ್ತಗಳು ಮತ್ತು ಜಂಕ್ಷನ್ಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಕರ್ನಾಟಕದ ಸಂಸ್ಕೃತಿ ಮತ್ತು ಸಾಧಕರನ್ನು ಬಿಂಬಿಸುವ 75ಕ್ಕೂ ಹೆಚ್ಚು ಕಲಾಕೃತಿಗಳನ್ನು ಎಲ್ಇಡಿ ದೀಪಗಳ ಮೂಲಕ ಪ್ರದರ್ಶಿಸಲಾಗುತ್ತದೆ. ದೇಶ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರ ವೀಕ್ಷಣೆಗಾಗಿ ಈ ಅದ್ಭುತ ಬೆಳಕಿನ ಹಬ್ಬವನ್ನು ಒಟ್ಟು 21 ದಿನಗಳ ಕಾಲ ಮುಂದುವರಿಸಲಾಗುತ್ತದೆ.
ಅರಮನೆ ದಸರಾ ಮತ್ತು ನಾಡಹಬ್ಬ ದಸರಾ: 1969ರ ನಂತರ ಮೈಸೂರು ರಾಜಮನೆತನದ ಆಡಳಿತ ಅಂತ್ಯಗೊಂಡ ಹಿನ್ನೆಲೆಯಲ್ಲಿ ದಸರಾ ಆಚರಣೆಯಲ್ಲಿ ಮಹತ್ವದ ಬದಲಾವಣೆ ಉಂಟಾಯಿತು. ಪ್ರಸ್ತುತ ಮೈಸೂರಿನಲ್ಲಿ ದಸರಾ ಎರಡು ಪ್ರಮುಖ ರೂಪಗಳಲ್ಲಿ ನಡೆಯುತ್ತದೆ.
ಒಂದೆಡೆ ಅರಮನೆಯೊಳಗೆ ರಾಜಮನೆತನದ ಪರಂಪರೆಯನ್ನು ಮುಂದುವರಿಸಿಕೊಂಡು ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿ, ಶಮೀಪೂಜೆ ಹಾಗೂ ಇತರ ಸಾಂಪ್ರದಾಯಿಕ ವಿಧಿವಿಧಾನಗಳು ಇದರ ಭಾಗವಾಗಿವೆ.
ಮತ್ತೊಂದೆಡೆ ಕರ್ನಾಟಕ ಸರ್ಕಾರವು ಸಾರ್ವಜನಿಕರಿಗಾಗಿ ‘ನಾಡಹಬ್ಬ ದಸರಾ’ವನ್ನು ಆಯೋಜಿಸುತ್ತದೆ. ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ.
ಹೀಗಾಗಿ ಇಂದಿನ ಮೈಸೂರು ದಸರಾ ರಾಜಮನೆತನದ ಪರಂಪರೆ ಮತ್ತು ಆಧುನಿಕ ಸಾರ್ವಜನಿಕ ಉತ್ಸವದ ಸಮನ್ವಯವಾಗಿ ರೂಪುಗೊಂಡಿದೆ.

ಚಾಮುಂಡೇಶ್ವರಿ ಉತ್ಸವ ಮತ್ತು ಜಂಬೂ ಸವಾರಿ: ಮೈಸೂರು ದಸರಾ ಮತ್ತು ಆನೆಗಳ ನಡುವಿನ ಸಂಬಂಧವು ಬಹಳ ಹಳೆಯದು. ಒಡೆಯರ ಕಾಲದ ರಾಜವೈಭವದ ಮೆರವಣಿಗೆಗಳಿಂದ ಆರಂಭವಾದ ಈ ಪರಂಪರೆ, ಇಂದು ಸರ್ಕಾರದ ನೇತೃತ್ವದಲ್ಲಿ ನಡೆಯುವ ಜಂಬೂ ಸವಾರಿಯ ರೂಪದಲ್ಲಿ ಮುಂದುವರಿದಿದೆ.
ಜಂಬೂ ಸವಾರಿ ಆರಂಭಕ್ಕೆ ಮುನ್ನ ಶುಭ ಕುಂಭಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತ್ತದೆ. ಜಂಬೂ ಸವಾರಿಯು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡೆಯುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಯನ್ನು ಹೊತ್ತು 14 ಅಲಂಕೃತ ಗಜಗಳೊಂದಿಗೆ, ಜನಸಾಗರದೊಡನೆ ಧೀರ-ಗಂಭೀರ ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ಗಜರಾಜನ ಠೀವಿಗೆ ಸರಿಸಾಟಿಯಿಲ್ಲ. ಭಾರತದ ಬೇರೆಲ್ಲೂ ದಸರಾ ಸಮಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಆನೆಗಳು ಪಾಲ್ಗೊಳ್ಳುವುದಿಲ್ಲ.
ಅಂಬಾರಿ ಹೊತ್ತ ಬಲರಾಮನ ಜತೆಗೆ ಪೊಲೀಸ್ ಬ್ಯಾಂಡ್ನ ಆಕರ್ಷಕ ತಾಳವಾದ್ಯ ಕಳೆಗಟ್ಟುತ್ತದೆ. ಅಲ್ಲದೆ, ಕಂಸಾಳೆ ಕುಣಿತ, ಕಲಾತಂಡಗಳ ನೃತ್ಯ ಪ್ರದರ್ಶನಗಳ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕೃತಿ ಸಾರುವ ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯುತ್ತದೆ. ಇದರ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ದಸರೆಯ ವಿಶೇಷ ಕಾರ್ಯಕ್ರಮಗಳು:
- ಯುವಸಂಭ್ರಮ, ಯುವದಸರಾ: ದಸರಾಗೆ ಯುವಜನರನ್ನು ಸೆಳೆಯಲು ಯುವಸಂಭ್ರಮ ಮತ್ತು ಯುವದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಬಯಲು ರಂಗಮಂದಿರದಲ್ಲಿ ಯುವಸಂಭ್ರಮ ಸಮಾರಂಭ ನಡೆಯುತ್ತದೆ. ಇದರಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಜನಪದ ಸೇರಿದಂತೆ ವಿವಿಧ ಪ್ರಕಾರಗಳ ನೃತ್ಯ ಕಲಾವಿದರ ಪ್ರದರ್ಶನ ಗಮನ ಸೆಳೆಯುತ್ತದೆ. ವಿವಿಧ ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇನ್ನು ಯುವದಸರಾದಲ್ಲಿ ಸಿನಿಮಾ ತಾರೆಯರು ಹಾಗೂ ಖ್ಯಾತ ಗಾಯಕರ ಸಮಾಗಮವಾಗುತ್ತದೆ. ಮಹಾರಾಜ ಮೈದಾನದಲ್ಲಿ ಸಮಾರಂಭ ನಡೆಯುತ್ತದೆ. ತಮ್ಮ ನೆಚ್ಚಿನ ನಟ-ನಟಿಯರು, ಗಾಯಕರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಯುವದಸರಾದಲ್ಲಿ ಜನ ಸೇರುತ್ತಾರೆ.
- ಕಂಬಳ: ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೃಷಿ ಸಂಸ್ಕೃತಿ ಹಾಗೂ ಜನಪದದ ಪ್ರತೀಕವಾದ ‘ಕಂಬಳ’ ಆಯೋಜನೆ ಮಾಡಲಾಗುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ಮೈಸೂರಿನ ಸಾತಗಳ್ಳಿಯಲ್ಲಿ ಆಯೋಜಿಸಲು ಅಧಿಕೃತವಾಗಿ ಸಿದ್ಧತೆಗಳು ನಡೆದಿವೆ. ದಷ್ಟಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಪದದೊಂದಿಗೆ ಹಾಸುಹೊಕ್ಕಾಗಿದೆ. ಸಾಂಸ್ಕೃತಿಕ ಹಿನ್ನೆಲೆಯ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸಲಾಗುತ್ತಿದೆ.
- ಮೇಳಗಳು: ಕೃಷಿ, ಆಹಾರ ಮೇಳಗಳನ್ನು ದಸರಾದಲ್ಲಿ ನಡೆಸಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಸ್ಥಳೀಯ ಹಾಗೂ ವಿಶೇಷ ತಿನಿಸುಗಳು ಮಳಿಗೆಗಳಲ್ಲಿ ಸಿಗುತ್ತವೆ. ಆಹಾರಪ್ರಿಯರಿಗೆ ಈ ಮೇಳ ಖುಷಿ ಕೊಡುತ್ತದೆ. ಇಲ್ಲಿ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ. ತಿನ್ನುವ ಮತ್ತು ಅಡುಗೆ ಸ್ಪರ್ಧೆಗಳು ನಡೆಯುತ್ತವೆ. ವಿಜೇತರಿಗೆ ವಿಶೇಷ ಬಹುಮಾನಗಳು ಸಹ ಇರುತ್ತವೆ. ಕೃಷಿಮೇಳವು ರೈತರಿಗೆ ಸಹಕಾರಿಯಾಗಲಿದೆ. ನಾನಾ ತಳಿಯ ಬೆಳೆಗಳು ಮತ್ತು ಹಣ್ಣುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಇರುತ್ತದೆ. ರೈತರಿಗೆ ಕೃಷಿ ಸಂಬಂಧಿತ ಸಲಹೆಗಳಿಗಾಗಿ ವಿಚಾರಣಾ ಸಂಕಿರಣಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ.
- ಫಲಪುಷ್ಪ, ವಸ್ತುಪ್ರದರ್ಶನ: ದಸರಾದಲ್ಲಿ ಫಲಪುಷ್ಪ ಮತ್ತು ವಸ್ತುಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಬಗೆಯ ಪುಷ್ಪಗಳಿಂದ ನಾನಾ ಮಾದರಿಗಳನ್ನು ರಚಿಸಿ ಪ್ರದರ್ಶಿಸಲಾಗುತ್ತದೆ. ಆಕರ್ಷಕ ಪುಷ್ಪ ಮಾದರಿಗಳು ಜನರನ್ನು ಸೆಳೆಯುವಂತಿರುತ್ತವೆ. ಅನೇಕರಿಗೆ ಇದು ಸೆಲ್ಫಿ ಸ್ಪಾಟ್ ಆಗುತ್ತದೆ. ಸರ್ಕಾರಗಳ ಪ್ರಮುಖ ಯೋಜನೆಗಳನ್ನು, ಕಾರ್ಯಸಾಧನೆಗಳನ್ನು ವಸ್ತುಪ್ರದರ್ಶನದ ಮೂಲಕ ತಿಳಿಸಲಾಗುತ್ತದೆ. ನಾಡು-ದೇಶದ ಇತಿಹಾಸ, ಪ್ರವಾಸಿತಾಣಗಳ ಬಗ್ಗೆ ಅರಿವು ಮೂಡಿಸುವ ಮಾದರಿಗಳು ಇರುತ್ತವೆ.
- ಗೊಂಬೆ ಪ್ರದರ್ಶನ: ಸ್ಥಳೀಯವಾಗಿ ‘ಗೊಂಬೆ ಹಬ್ಬ’ ಅಥವಾ ‘ಬೊಂಬೆ ಮನೆ’ ಎಂದು ಕರೆಯಲ್ಪಡುವ ಮೈಸೂರು ದಸರಾ ಗೊಂಬೆ ಪ್ರದರ್ಶನವು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಇದರಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ಜೋಡಿಸಲಾದ ಗೊಂಬೆಗಳು ಮತ್ತು ಮೂರ್ತಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವು ರಾಮಾಯಣದಂತಹ ಪೌರಾಣಿಕ ಮಹಾಕಾವ್ಯಗಳು, ದಸರಾ ಮೆರವಣಿಗೆಯ ದೃಶ್ಯಗಳು (ಜಂಬೂ ಸವಾರಿ), ನವದುರ್ಗೆಯರು ಮತ್ತು ಅಷ್ಟಲಕ್ಷ್ಮಿಯರ ಜೊತೆಗೆ ಸಮಕಾಲೀನ ಅಥವಾ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳನ್ನು ಹೆಚ್ಚಾಗಿ ಬಿಂಬಿಸುತ್ತವೆ.
- ಮಕ್ಕಳ ದಸರಾ: ದಸರಾದಲ್ಲಿ ವಿಶೇಷ ಆಕರ್ಷಣೆ ಮಕ್ಕಳ ದಸರಾ ಆಗಿದೆ. ಮಕ್ಕಳ ದಸರಾದಲ್ಲಿ ವಿಶೇಷವಾಗಿ ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷ ಸಾಧನೆ ತೋರಿದ ಮಕ್ಕಳಿಂದ ಮಕ್ಕಳ ದಸರಾವನ್ನು ಉದ್ಘಾಟಿಸಲಾಗುತ್ತದೆ. ಮೈಸೂರು ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಕಲೆ, ಸಂಗೀತ, ನೃತ್ಯ, ಜನಪದ ಸಂಪ್ರದಾಯಗಳು ಮತ್ತು ಐತಿಹಾಸಿಕ ನೆನಪುಗಳನ್ನು ಒಂದೆಡೆ ಸೇರಿಸುವ ಉತ್ಸವವಾಗಿದೆ.
- ಗೋಷ್ಠಿಗಳು: ಖ್ಯಾತ ವಿದ್ವಾಂಸರು, ಸಾಹಿತಿಗಳು, ಕವಿಗಳ ನೆಲೆವೀಡು ಮೈಸೂರು. ಸಂಗೀತ-ಸಾಹಿತ್ಯ ಕ್ಷೇತ್ರಗಳಿಗೆ ಮೈಸೂರು ತನ್ನದೇ ಆದ ಕೊಡುಗೆ ನೀಡಿದೆ. ಆದ್ದರಿಂದ ದಸರಾದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣಗಳು, ಸಂಗೀತ ಕಚೇರಿಗಳನ್ನು ಆಯೋಜಿಸಲಾಗುತ್ತದೆ. ದಸರಾ ಮತ್ತು ಯುವ ಕವಿಗೋಷ್ಠಿ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆಯಲಾಗುತ್ತದೆ. ಓದುಗ ಪ್ರಿಯರಿಗಾಗಿ ಪುಸ್ತಕ ಮೇಳ ಕೂಡ ನಡೆಸಲಾಗುತ್ತದೆ. ಸಂಗೀತ ಪ್ರಿಯರಿಗಾಗಿ ಅರಮನೆಯಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. ಖ್ಯಾತ ವಿದ್ವಾಂಸರು, ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಕಲಾಸಕ್ತರಿಗಾಗಿ ಚಲಚಿತ್ರೋತ್ಸವ, ನಾಟಕ ಪ್ರದರ್ಶನಗಳು ಸಹ ನಡೆಯುತ್ತವೆ.
- ಪಂಜಿನ ಕವಾಯತು: ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ಬಳಿಕ ಸಂಜೆ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಅತ್ಯಂತ ಆಕರ್ಷಕ ಮತ್ತು ರೋಮಾಂಚಕ ಅಂತಿಮ ಕಾರ್ಯಕ್ರಮ ಪಂಜಿನ ಕವಾಯತು. ಇದು ಪೊಲೀಸ್ ಪಡೆಗಳ ಕವಾಯತು, ಸಾಹಸ ಪ್ರದರ್ಶನ ಹಾಗೂ ಬಣ್ಣ ಬಣ್ಣದ ಪಟಪಟಿಸುವ ಪಂಜುಗಳ ಬೆಳಕಿನ ಸಂಭ್ರಮದೊಂದಿಗೆ ಕಣ್ಮನ ಸೆಳೆಯುತ್ತದೆ. ಅತ್ಯಾಕರ್ಷಕ ಅಶ್ವಾರೋಹಿ ದಳದ ಸಾಹಸಗಳು, ಮೈಜುಮ್ಮೆನಿಸುವ ಮೋಟಾರ್ ಸೈಕಲ್ ಸಾಹಸ ಪ್ರದರ್ಶನಗಳು (ಡೇರ್ ಡೆವಿಲ್ ಸ್ಟಂಟ್ಸ್), ಪೊಲೀಸ್ ಬ್ಯಾಂಡ್ ವಾದನ ಮತ್ತು ಪಂಜುಗಳೊಂದಿಗೆ ಸಾಮೂಹಿಕ ಕವಾಯತು ನಡೆಯುತ್ತದೆ. ರಾತ್ರಿಯ ವೇಳೆ ಆಕಾಶದಲ್ಲಿ ಮೂಡುವ ವರ್ಣರಂಜಿತ ಸುಂದರ ಸಿಡಿಮದ್ದು ಪ್ರದರ್ಶನ ಹಾಗೂ ಲೇಸರ್ / ಡ್ರೋನ್ ಶೋ ಕೂಡ ಗಮನ ಸೆಳೆಯುತ್ತದೆ. ದಸರಾಗೆ ಅಂತಿಮ ಸ್ಪರ್ಶ ನೀಡುವ ಕಾರ್ಯಕ್ರಮ ಇದಾಗಿದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪರಂಪರೆಯು ದಸರಾ ಉತ್ಸವದ ಸಮಾಪ್ತಿಯನ್ನು ಸಾರುತ್ತದೆ.
ಅರಮನೆಯೊಳಗಿನ ಸಾಂಪ್ರದಾಯಿಕ ಆಚರಣೆಗಳು ಮೈಸೂರು ಒಡೆಯರ ಇತಿಹಾಸವನ್ನು ನೆನಪಿಸಿದರೆ, ಸಾರ್ವಜನಿಕ ದಸರಾ ಕಾರ್ಯಕ್ರಮಗಳು ಆ ಪರಂಪರೆಯನ್ನು ಜನಸಾಮಾನ್ಯರೊಂದಿಗೆ ಸಂಪರ್ಕಿಸುತ್ತವೆ.
ಸಮಾರೋಪ: ಮೈಸೂರು ದಸರಾ ಹಲವು ಶತಮಾನಗಳ ಇತಿಹಾಸ, ಧಾರ್ಮಿಕ ನಂಬಿಕೆ, ರಾಜಪರಂಪರೆ, ಕಲೆ, ಸಂಸ್ಕೃತಿ ಮತ್ತು ಜನಪಾಲ್ಗೊಳ್ಳುವಿಕೆಯ ಅಪೂರ್ವ ಸಂಗಮವಾಗಿದೆ. ವಿಜಯನಗರದ ಪರಂಪರೆಯಿಂದ ಮೈಸೂರು ಒಡೆಯರ ರಾಜವೈಭವದವರೆಗೆ ಮತ್ತು ಅಲ್ಲಿಂದ ಇಂದಿನ ನಾಡಹಬ್ಬದ ರೂಪದವರೆಗೆ ದಸರಾ ಹಲವು ಹಂತಗಳನ್ನು ದಾಟಿ ಬೆಳೆದಿದೆ.
ಬನ್ನಿ, ಈ ವರ್ಷದ ನಾಡಹಬ್ಬ ದಸರಾದಲ್ಲಿ ಎಲ್ಲರೂ ಪಾಲ್ಗೊಂಡು, ವೈವಿಧ್ಯಮಯ ಆಚರಣೆಗಳನ್ನು ಕಣ್ತುಂಬಿಕೊಳ್ಳೋಣ!
— ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ




More Stories
ವಿಜಯೇಂದ್ರ ಆರೋಪ: ಸ್ಟಿಂಗ್ ಆಪರೇಷನ್ ಕಾಂಗ್ರೆಸ್ನ ಚರಿತ್ರೆ
ಬೆಂಗಳೂರು ರಸ್ತೆಗುಂಡಿ: ಬ್ಯಾಟರಾಯನಪುರದಲ್ಲೇ 6,000 ಗುಂಡಿ ಎಂದು ವರದಿ
ಷಟಲ್ ಬ್ಯಾಡ್ಮಿಂಟನ್: ಈಜಿಪ್ಟ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಶಿವಮೊಗ್ಗದ ಅವಳಿ ಸಹೋದರರು