AI-Vartha.in

ನಿಖರ ಸುದ್ದಿ, ನೇರ ವರದಿ

ಮಲೆನಾಡಿನ ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬಿದ ‘ಕೆಸರಲ್ಲಿ ಒಂದು ದಿನ’ ಕಾರ್ಯಕ್ರಮ

ಮೊಬೈಲ್ ಯುಗದಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿ ಉಳಿಸುವ ಅಗತ್ಯ: ಗೀತಾ

ಶಿವಮೊಗ್ಗ: ಮೊಬೈಲ್ ಹಾಗೂ ಆಧುನಿಕ ಜೀವನಶೈಲಿಯ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಶಿವಮೊಗ್ಗ-2 ತಾಲೂಕು ವತಿಯಿಂದ ಮಲೆನಾಡು ಗ್ರಾಮೀಣ ಕ್ರೀಡಾಕೂಟ ‘ಕೆಸರಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಗೀತಾ ಅವರು ಭತ್ತದ ಕಳಸಿಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದಿನ ಮೊಬೈಲ್ ಯುಗದಲ್ಲಿ ಬಹುತೇಕರು ತಮ್ಮದೇ ಆದ ಜಗತ್ತಿನಲ್ಲಿ ಕಳೆದುಹೋಗುತ್ತಿದ್ದಾರೆ. ಇದರ ನಡುವೆ ನಮ್ಮ ಹಿಂದಿನ ಸಂಸ್ಕೃತಿ, ಗ್ರಾಮೀಣ ಜೀವನಶೈಲಿ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯನ್ನು ಮತ್ತೊಮ್ಮೆ ನೆನಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಹಳ್ಳಿ ಸೊಗಡಿನ ಆಟ, ಪಾಠ, ಊಟ

ಗ್ರಾಮೀಣ ಕ್ರೀಡೆಗಳ ಉದ್ಘಾಟನೆಯನ್ನು ಸ್ಥಳೀಯ ಸಬ್ ಇನ್‌ಸ್ಪೆಕ್ಟರ್ ಪಾರ್ವತಿಬಾಯಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಒಂದು ದಿನದ ಆಟ, ಪಾಠ, ಊಟ ಹಾಗೂ ಮನರಂಜನೆಯೊಂದಿಗೆ ಹಳ್ಳಿ ಸೊಗಡಿನ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮಣ್ಣಿನೊಂದಿಗೆ ಬೆರೆತು ನಡೆಯುವ ಗ್ರಾಮೀಣ ಕ್ರೀಡೆಗಳು ಭಾಗವಹಿಸಿದವರಲ್ಲಿ ಉತ್ಸಾಹ ಮೂಡಿಸಿದವು. ಗ್ರಾಮೀಣ ಬದುಕಿನ ನೆನಪುಗಳನ್ನು ಮರುಕಳಿಸುವ ಜೊತೆಗೆ ಯುವಜನತೆಗೆ ಸ್ಥಳೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕ್ರೀಡೆಗಳ ಪರಿಚಯವಾಗುವಂತಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಹರಳೆಣ್ಣೆ ರಾಮಪ್ಪ, ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ಮಮತಾ ಶಿವಣ್ಣ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದೂದ್ಯ ನಾಯ್ಕ, ಉದಯ್ ಕುಮಾರ್ ಶೆಟ್ಟಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಸಂಜೀವಪ್ಪ ಹಾಗೂ ಕುಂಸಿ ಹಾಲು ಒಕ್ಕೂಟ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ನಿರ್ದೇಶಕ ಮುರುಳಿಧರ್ ಶೆಟ್ಟಿ ವಹಿಸಿದ್ದರು. ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಸ್ವಾಗತಿಸಿದರು. ಜಿಲ್ಲಾ ಎಂ.ಐ.ಎಸ್.ಸಿ. ಯೋಜನಾಧಿಕಾರಿ ಬಾಲಕೃಷ್ಣ, ಪ್ರಾದೇಶಿಕ ಯೋಜನಾಧಿಕಾರಿಗಳಾದ ಗಜಾನನ, ಸುರೇಂದ್ರ, ಯಶೋಧಾ ಹಾಗೂ ಎಂ. ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯಾಧಿಕಾರಿ ವಿನೋದಾ ಬಾಲಚಂದ್ರ ವಂದಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮೇಲ್ವಿಚಾರಕ ಶ್ರೀಕಾಂತ್, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಯೋಜನೆಯ ಸಿಬ್ಬಂದಿ, ಊರಿನ ಹಿರಿಯರು ಹಾಗೂ ತಾಲೂಕಿನ ವಿವಿಧ ಒಕ್ಕೂಟಗಳ ಸದಸ್ಯರು ಭಾಗವಹಿಸಿದ್ದರು.

Sri Kshetra Dharmasthala Rural Development Project organized the Malnad Rural Sports Festival ‘Kesaralli Ondu Dina’ in Shivamogga to revive traditional village sports, culture and rural lifestyle. The event featured traditional competitions, entertainment and community participation.