AI-Vartha.in

ನಿಖರ ಸುದ್ದಿ, ನೇರ ವರದಿ

ಭಟ್ಕಳದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ: ಮಸೀದಿ-ಮದರಸಾಗೆ ಹಾನಿ, ಗಣೇಶ ಮೂರ್ತಿಯತ್ತಲೂ ಕಲ್ಲು ಎಸೆದ ಆರೋಪ; ಪೊಲೀಸ್ ಠಾಣೆ ಎದುರು ಪ್ರತಿಭಟನೆ!

ಭಟ್ಕಳ, Ai-ವಾರ್ತ, ಸೆಪ್ಟೆಂಬರ್ 17: ಭಟ್ಕಳ ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆಯ ವೇಳೆ ಬುಧವಾರ ತಡರಾತ್ರಿ ಭಾರಿ ಕಲ್ಲು ತೂರಾಟ ಜರುಗಿದ್ದು, ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪರಸ್ಪರ ದೂರು-ಪ್ರತಿದೂರುಗಳು ದಾಖಲಾಗಿವೆ.

ಘಟನೆಯ ವಿವರ: ತಲಾಂದದಿಂದ ಹೊರಟ ಗಣೇಶ ವಿಸರ್ಜನಾ ಮೆರವಣಿಗೆಯು ಗುಳ್ಳೆ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ಸ್ಟೇಷನ್ ರಸ್ತೆಯ ಮೂಲಕ ಸಾಗುತ್ತಿದ್ದಾಗ, ಮಾರ್ಗಮಧ್ಯದಲ್ಲಿದ್ದ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾದ ಮೇಲೆ ಅಪರಿಚಿತ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಿಂದ ಮಸೀದಿಯ ಕಿಟಕಿ ಗಾಜುಗಳು ಪುಡಿಯಾಗಿವೆ.

ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ನೂರಾರು ಜನರು ಭಟ್ಕಳ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು. ಬಂದರು ರಸ್ತೆ ನಿವಾಸಿ ಅಬ್ದುಲ್ ಅಲಿಂ ಹಾಗೂ ಶಾಹುಲ್ ಅಮೀನ್ ಗವಾಯಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಗಣೇಶ ಮೂರ್ತಿಯತ್ತಲೂ ಕಲ್ಲು ತೂರಾಟ ಆರೋಪ! ಇನ್ನೊಂದೆಡೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ತಲಾಂದ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ (47) ಅವರು ಪೊಲೀಸರಿಗೆ ಮತ್ತೊಂದು ದೂರು ನೀಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೆರವಣಿಗೆಯು ಮದರಸಾ ಕಡೆಗೆ ಬರುತ್ತಿದ್ದಾಗ ರಾತ್ರಿ 9:30ರ ಸುಮಾರಿಗೆ ರಾಮಚಂದ್ರ ನಾಯ್ಕ ಎಂಬುವವರ ಕಟ್ಟಡದ ಮೇಲಿಂದ ಅಪರಿಚಿತರು ಗಣೇಶ ಮೂರ್ತಿಯತ್ತ ಕಲ್ಲು ತೂರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಮಸೀದಿ-ಮದರಸಾಗಳು ಸೇರಿದಂತೆ ಪಟ್ಟಣದಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Tension prevailed in Bhatkal following a stone-pelting incident during the Talanda public Ganesha immersion procession near Ismail Mosque and Tajusunna Arabic Madrasa. While Muslim youth protested outside the police station over mosque damage, Ganesha committee president Raju Naik filed a counter-complaint alleging stone pelting on the Ganesha idol as well. Heavy police security has been deployed.