AI-Vartha.in

ನಿಖರ ಸುದ್ದಿ, ನೇರ ವರದಿ

9 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷ: ಸುರಕ್ಷಿತವಾಗಿ ರಕ್ಷಿಸಿದ ಸ್ನೇಕ್ ಕಿರಣ್

ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನೆಗಳೂರು ಗ್ರಾಮದ ಕೋಡತಾಳು ಹಳ್ಳಿಯಲ್ಲಿ ಸುಮಾರು 9 ಅಡಿ ಉದ್ದ ಹಾಗೂ 16 ಕೆ.ಜಿ. ತೂಕದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ನೆಗಳೂರು ಗ್ರಾಮದ ಕೋಡತಾಳು ಹಳ್ಳಿಯ ಸ್ವಾಮಿ ವಿಶ್ವನಾಥ್ ಅವರ ಮನೆಯ ಸಮೀಪವಿದ್ದ ಕಲ್ಲಿನ ರಾಶಿಯ ಅಡಿಯಲ್ಲಿ ಬೃಹತ್ ಹೆಬ್ಬಾವು ಅಡಗಿ ಕುಳಿತಿರುವುದು ಕಂಡುಬಂದಿದೆ. ಹೆಬ್ಬಾವನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ತಕ್ಷಣವೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಸತತ ಪ್ರಯತ್ನ ನಡೆಸಿ, ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಸುಮಾರು 9 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.
ನಂತರ ರಕ್ಷಿಸಲಾದ ಹೆಬ್ಬಾವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ನ್ಯಾಪ್ತಿ ಶಾಖೆಯ ಡೆಪ್ಯೂಟಿ ಆರ್‌ಎಫ್‌ಒ ಶಿವಕುಮಾರ್ ಅವರ ಸೂಚನೆಯಂತೆ ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.
ಹೆಬ್ಬಾವು ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಉರಗ ರಕ್ಷಕ ಸ್ನೇಕ್ ಕಿರಣ್ ಅವರ ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.