ಶಿವಮೊಗ್ಗದ ಛಾಯಾಗ್ರಾಹಕ ನಾಗರಾಜ್‌ಗೆ ರಾಷ್ಟ್ರೀಯ ಮಟ್ಟದ ಗೌರವ
ಶಿಕಾರಿಪುರದ ಹೋರಿ ಹಬ್ಬದ ಚಿತ್ರಕ್ಕೆ ‘ಕನ್ಸೋಲೇಶನ್ ಅವಾರ್ಡ್’
ಶಿವಮೊಗ್ಗ: ಆಂಧ್ರಪ್ರದೇಶ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ–2026ರಲ್ಲಿ ಶಿವಮೊಗ್ಗದ ಪತ್ರಿಕಾ ಹಾಗೂ ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಕನ್ಸೋಲೇಶನ್ ಅವಾರ್ಡ್ ಲಭಿಸಿದೆ.
ಶಿಕಾರಿಪುರದಲ್ಲಿ ನಡೆದ ಹೋರಿ ಹಬ್ಬದ ಸಂಭ್ರಮವನ್ನು ಸೆರೆಹಿಡಿದ ಅಪರೂಪದ ಛಾಯಾಚಿತ್ರಕ್ಕೆ ಸ್ಪಾಟ್ ನ್ಯೂಸ್ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದೆ. ಗ್ರಾಮೀಣ ಸಂಸ್ಕೃತಿ, ಹಬ್ಬದ ವೈಭವ ಹಾಗೂ ಜನಜೀವನವನ್ನು ನೈಜವಾಗಿ ಬಿಂಬಿಸಿರುವ ಈ ಚಿತ್ರ ಛಾಯಾಚಿತ್ರ ಕ್ಷೇತ್ರದಲ್ಲಿ ಗಮನ ಸೆಳೆದಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಸ್ಪರ್ಧೆಯಲ್ಲೂ ಮೆಚ್ಚುಗೆ
ನಾಗರಾಜ್ ಅವರು ಸೆರೆಹಿಡಿದ ಇದೇ ಛಾಯಾಚಿತ್ರವು ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಫಲವಾಗಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆದ ಎರಡು ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಈ ಚಿತ್ರ ಆಯ್ಕೆಯಾಗಿತ್ತು.
ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡ ಛಾಯಾಚಿತ್ರಗಳು
ಶಿವಮೊಗ್ಗ ನಾಗರಾಜ್ ಅವರು ಸೆರೆಹಿಡಿದ ಹಲವಾರು ಛಾಯಾಚಿತ್ರಗಳು ದೇಶದ ವಿವಿಧ ಭಾಗಗಳಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಪ್ರದರ್ಶನಗೊಂಡಿವೆ. ಅವರ ಛಾಯಾಚಿತ್ರಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳ ಜೊತೆಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿವೆ.
ತಮ್ಮ ಛಾಯಾಚಿತ್ರಗಳ ಮೂಲಕ ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕಕ್ಕೆ ವಿಶೇಷ ಗೌರವ ತಂದುಕೊಟ್ಟಿರುವ ನಾಗರಾಜ್, ಛಾಯಾಗ್ರಹಣವನ್ನು ಕೇವಲ ವೃತ್ತಿಯಾಗಿ ನೋಡದೆ ಜನಜಾಗೃತಿ ಮೂಡಿಸುವ ಮಾಧ್ಯಮವಾಗಿಯೂ ಬಳಸುತ್ತಿದ್ದಾರೆ.
ಪ್ರತಿವರ್ಷ ಛಾಯಾಚಿತ್ರ ಪ್ರದರ್ಶನ
ಪ್ರತಿವರ್ಷ ತಾವು ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸುವ ಮೂಲಕ ವಿವಿಧ ಸಾಮಾಜಿಕ ವಿಷಯಗಳು, ಪ್ರಕೃತಿ, ವನ್ಯಜೀವಿ ಹಾಗೂ ಜನಜೀವನದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಾಗರಾಜ್ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿವಮೊಗ್ಗ ನಾಗರಾಜ್ ಅವರಿಗೆ ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದಿಂದ ಅಭಿನಂದನೆಗಳು ವ್ಯಕ್ತವಾಗಿವೆ.



More Stories
Google hit with record EU fine over Shopping service