AI-Vartha.in

ನಿಖರ ಸುದ್ದಿ, ನೇರ ವರದಿ

ಇಂಟರಾಕ್ಟ್ ಕ್ಲಬ್‌ಗಳು ಮುಂದಿನ ಪೀಳಿಗೆಯ ರೋಟೇರಿಯನ್ನರನ್ನು ರೂಪಿಸುತ್ತವೆ: ವರ್ಷಿಣಿ

ಶಿವಮೊಗ್ಗ, 7 ಸೆಪ್ಟೆಂಬರ್: ಇಂಟರಾಕ್ಟ್ ಕ್ಲಬ್‌ಗಳು 12 ರಿಂದ 18 ವರ್ಷದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದ್ದು, ಇಲ್ಲಿಯೇ ಮುಂದಿನ ಪೀಳಿಗೆಯ ರೋಟೇರಿಯನ್ನರು ರೂಪುಗೊಳ್ಳುತ್ತಾರೆ ಎಂದು ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷೆ ಕುಮಾರಿ ವರ್ಷಿಣಿ ಹೇಳಿದರು.

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 2026-27ನೇ ಸಾಲಿನ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಅರ್ಥಪೂರ್ಣ ಸೇವಾ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಅವರ ವ್ಯಕ್ತಿತ್ವ ವಿಕಸನಕ್ಕೆ ಈ ಕ್ಲಬ್‌ಗಳು ಪ್ರೇರಣೆ ನೀಡುತ್ತವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಶಿಕ್ಷಕಿ ಆಸಿಯ ಬಾನು ಅವರು ಶಾಲೆಯ ಅಭಿವೃದ್ಧಿಗೆ ರೋಟರಿ ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸಿದರು. ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಡಿ.ಕೆ. ಮಾತನಾಡಿ, ಪ್ರತಿಯೊಂದು ಇಂಟರಾಕ್ಟ್ ಕ್ಲಬ್ ವರ್ಷಕ್ಕೆ ಕನಿಷ್ಠ ಎರಡು ಪ್ರಮುಖ ಯೋಜನೆಗಳನ್ನು ಕೈಗೊಳ್ಳಬೇಕು, ಅದರಲ್ಲಿ ಒಂದು ಸ್ಥಳೀಯ ಸಮುದಾಯ ಅಭಿವೃದ್ಧಿ ಹಾಗೂ ಮತ್ತೊಂದು ಅಂತರರಾಷ್ಟ್ರೀಯ ತಿಳುವಳಿಕೆ ಉತ್ತೇಜಿಸುವ ಯೋಜನೆಯಾಗಿರಬೇಕು ಎಂದು ಕರೆ ನೀಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ಲಬ್ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ನೈರ್ಮಲ್ಯ ಜಾಗೃತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಕಾರ್ಯದರ್ಶಿ ಆರ್. ಮನೋಹರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾರ್ವಜನಿಕ ಭಾಷಣ, ನಾಯಕತ್ವ ತರಬೇತಿ ಮತ್ತು ತಂಡದ ಕಾರ್ಯಪಟುತ್ವ ಕುರಿತು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ವತಿಯಿಂದ ಇಂಗ್ಲಿಷ್-ಕನ್ನಡ ನಿಘಂಟು, ಪೆನ್ ಹಾಗೂ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮುರಳೀಧರ್, ಪುಷ್ಪವತಿ, ಉಷಾರಾಣಿ, ಶಶಿರೇಖಾ, ಇಂಟರಾಕ್ಟ್ ಕ್ಲಬ್ ಕಾರ್ಯದರ್ಶಿ ಖುಷಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.