ಸೆಪ್ಟೆಂಬರ್ 10: “ನಿಮ್ಮ ಗುರಿ ಮುಟ್ಟಲು ಏಕಾಗ್ರತೆ ಬಹಳ ಮುಖ್ಯ. ಮೊಬೈಲ್ ಬಳಕೆಯು ಕೇವಲ ಸಂವಹನಕ್ಕೆ ಸೀಮಿತವಾಗಿರಬೇಕು. ರೀಲ್ಸ್‌ಗಳಿಗೆ ಬಲಿಯಾದರೆ ಯುವಜನತೆಯ ಭವಿಷ್ಯ ಅಂಧಾಕಾರಕ್ಕೆ ತಳ್ಳಲ್ಪಡುತ್ತದೆ” ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಎಚ್ಚರಿಸಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್, ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್ ಶಿವಮೊಗ್ಗ, ಸ್ಪರ್ಧಾ ಅರಿವು ಅಕಾಡೆಮಿ ಬೆಂಗಳೂರು ಹಾಗೂ ಸಾಧನಾ ಅಕಾಡೆಮಿ ಶಿಕಾರಿಪುರ ಇವರ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ನಿಮ್ಮ ಕನಸು ನಮ್ಮ ಸಂಕಲ್ಪ’ ಉದ್ಯೋಗ ಪಥ ಸ್ಪರ್ಧಾತ್ಮಕ ಪರೀಕ್ಷೆಗಳ ಎರಡು ತಿಂಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಿಕೆಯ ಶಿಕ್ಷಣಕ್ಕಿಂತ ಆತ್ಮವಿಶ್ವಾಸ ವೃದ್ಧಿಸುವ ಮತ್ತು ಪ್ರತಿಭೆಯನ್ನು ಹೊರಹಾಕುವ ಕೌಶಲ್ಯಾಧಾರಿತ ಶಿಕ್ಷಣ ಅಗತ್ಯವಾಗಿದೆ. ಯುವಕರು ಹೊರ ಜಗತ್ತಿನ ಮಾಹಿತಿ ಸಂಗ್ರಹಿಸಿ ಕಠಿಣ ಶ್ರಮ ಪಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಐ ಹಾಗೂ ಖಾಸಗೀಕರಣದ ನಡುವೆ ಕೌಶಲ್ಯವೇ ಜೀವಾಳ ಆರ್ಯ ಪಿಯು ಕಾಲೇಜಿನ ಮುಖ್ಯಸ್ಥ ಎನ್. ರಮೇಶ್ ಮಾತನಾಡಿ, “ಇಂದು ಎಲ್ಲ ರಂಗಗಳಲ್ಲೂ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆವರಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ವಿಶೇಷ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ತರಬೇತಿ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಕಷ್ಟ” ಎಂದರು.
3,000 ಜನರಿಗೆ ಉದ್ಯೋಗ ನೀಡುವುದು ನಮ್ಮ ಗುರಿ ಸಮಾಜ ಸೇವಕ ಡಾ. ಶರತ್ ಮರಿಯಪ್ಪ ಮಾತನಾಡಿ, “ವಿದ್ಯಾರ್ಥಿಗಳು ಕೆಎಎಸ್, ಕೆಪಿಎಸ್‌ಸಿ, ಎಫ್‌ಡಿಎ, ಪಿಡಿಒ, ಪಿಎಸ್‌ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಉಚಿತವಾಗಿ ಎರಡು ತಿಂಗಳ ತರಬೇತಿ ನೀಡಲಾಗುತ್ತಿದೆ. ಸೆಪ್ಟೆಂಬರ್ 19 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಸುಮಾರು 3,000 ಮಂದಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು. ಅಲ್ಲದೆ, ಸೆಪ್ಟೆಂಬರ್ 26 ರಿಂದ ಬಿ.ಎಡ್ ವಿದ್ಯಾರ್ಥಿಗಳಿಗೂ 15 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್, ಪ್ರಮುಖರಾದ ರಂಗನಾಥ್ ಕೆ., ಜಿ.ಡಿ. ಮಂಜುನಾಥ್, ವಿನೋದ್ ಕೆ., ಪ್ರವೀಣ್ ಕುಮಾರ್, ತರಬೇತಿ ತಜ್ಞ ಶಂಕರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಬಿ. ಮಂಜುನಾಥ್, ಪಿ.ವಿ. ಬೈರಪ್ಪ, ಪಿಎಸ್‌ಐ ಕಿಟ್ಟಿ ಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



More Stories
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಹೆಚ್.ಸಿ. ಯೋಗೇಶ್ ನೇಮಕ: ಎಐಸಿಸಿಯಿಂದ ಅಧಿಕೃತ ಆದೇಶ!
ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ರೂಢಿಸಿಕೊಂಡು ಯಶಸ್ಸು ಸಾಧಿಸಿ: ಶಿವಮೊಗ್ಗದಲ್ಲಿ ಆದರ್ಶ್ ಹುಂಚದಕಟ್ಟೆ ಕರೆ!
ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ವೇಳೆ ತೆಪ್ಪ ಬಳಸಲು ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ : ಜಿಲ್ಲಾಧಿಕಾರಿ ಆದೇಶ!