ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 8: ಮಕ್ಕಳು ದೇವರಿಗೆ ಸಮಾನರು, ಅವರ ನಿರ್ಮಲ ಮನಸ್ಸು, ಮುಗ್ಧತೆ ಮತ್ತು ಪ್ರೀತಿಯಲ್ಲಿ ಶ್ರೀಕೃಷ್ಣ ಹಾಗೂ ರಾಧೆಯರ ದಿವ್ಯ ರೂಪವನ್ನು ಕಾಣಬಹುದು ಎಂದು ಬ್ರಹ್ಮಕುಮಾರಿ ರಾಜಯೋಗಿನಿ ಸ್ವಾತಿ ಅಕ್ಕನವರು ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದ ಬ್ರಹ್ಮಕುಮಾರಿ ನವಲೆ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ-ರಾಧೆಯರ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಹಾಗೂ ರಾಧೆಯರ ಆದರ್ಶ ಗುಣಗಳು, ಲೋಕಕಲ್ಯಾಣಕ್ಕಾಗಿ ಅವರು ನೀಡಿದ ಸಂದೇಶಗಳು, ಕೃಷ್ಣ ಜನ್ಮಾಷ್ಟಮಿಯ ಮಹತ್ವ ಮತ್ತು ಅದರ ಆಚರಣೆಯ ಕುರಿತು ವಿವರಣೆ ನೀಡಿದರು.
ಮಕ್ಕಳಿಗೆ ಶ್ರೀಕೃಷ್ಣ ಹಾಗೂ ರಾಧೆಯರ ವೇಷಭೂಷಣಗಳನ್ನು ತೊಡಿಸುವುದರಿಂದ ಅವರಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಮನೋಭಾವ, ಉಲ್ಲಾಸ, ಉತ್ಸಾಹ ಮತ್ತು ಸಂತೋಷ ಹೆಚ್ಚುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಜೀವನದಲ್ಲಿ ಅಳಿಸಲಾಗದ ನೆನಪುಗಳನ್ನು ಮೂಡಿಸುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಾಸಕ್ಕೂ ಸಹಕಾರಿಯಾಗುತ್ತವೆ. ಆದ್ದರಿಂದ ಪೋಷಕರು ಮಕ್ಕಳನ್ನು ಇಂತಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡಿ, ಈ ಶ್ರೀಕೃಷ್ಣ-ರಾಧೆಯರ ವೇಷಭೂಷಣ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅಪೂರ್ವ ಅನುಭವವಾಗಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಯೋಗ, ಧ್ಯಾನ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಇಂದು ವಿಶ್ವದಾದ್ಯಂತ ಜನಪ್ರಿಯವಾಗಿವೆ. ನವಲೆ ಕೇಂದ್ರದಲ್ಲಿ ಹೆಚ್ಚು ಜನರು ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಲವಾರು ಪೋಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು ಕಾರ್ಯಕ್ರಮದ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸ್ವಾತಿ ಅಕ್ಕನವರು ಶ್ರೀಕೃಷ್ಣ ಹಾಗೂ ರಾಧೆಯರ ವೇಷಭೂಷಣದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ವಿಶೇಷ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ನಂತರ ಎಲ್ಲರಿಗೂ ವಿಶೇಷ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಪರಿಸರ ನಾಗರಾಜ್, ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಶ್ರೀಮತಿ ಬಿಂದು ವಿಜಯಕುಮಾರ್, ನಾಗು ಅಕ್ಕನವರು, ರಕ್ಷಕ್ ಆರ್. ಮನೋಹರ್, ಕಲಾವತಿ, ಕಾವ್ಯ ಅಕ್ಕನವರು ಹಾಗೂ ನವಲೆ ಈಶ್ವರೀಯ ವಿಶ್ವವಿದ್ಯಾಲಯದ ಸದಸ್ಯರು ಉಪಸ್ಥಿತರಿದ್ದರು.



More Stories
ಶಿವಮೊಗ್ಗದ ನಮ್ಮ ಕ್ಲಿನಿಕ್ನಲ್ಲಿ ಗರ್ಭಿಣಿಯರಿಗೆ ವಿಶೇಷ ತಪಾಸಣೆ; ಸಿ.ಎಸ್. ಷಡಾಕ್ಷರಿ ನೀಡಿರುವ ಪ್ರಮುಖ ಸಲಹೆ ಏನು?
ಶಿವಮೊಗ್ಗದಲ್ಲಿ ಅದ್ದೂರಿ ದಸರಾ ಮಹೋತ್ಸವ ಆಚರಣೆಗೆ ಪ್ಲಾನ್; ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರಮುಖ ನಾಯಕರು, ಏನೇನು ಬೇಡಿಕೆ?
ಭದ್ರಾವತಿಯಲ್ಲಿ ಜಂಟಿ ಇಲಾಖೆಗಳ ದಾಳಿ: ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ, ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ