ಶಿವಮೊಗ್ಗ: ಗಮಕ ವಾಚನ–ವ್ಯಾಖ್ಯಾನ, ವಿಚಾರಗೋಷ್ಠಿ, ನೃತ್ಯರೂಪಕ ಹಾಗೂ ವಿವಿಧ ಸ್ಪರ್ಧೆಗಳನ್ನು ಒಳಗೊಂಡ ಗಮಕ ದಸರಾ ಅಕ್ಟೋಬರ್ 16ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಕಡೂರಿನ ಮಾಜಿ ಶಾಸಕ ಹಾಗೂ ಗಮಕ ವ್ಯಾಖ್ಯಾನಕಾರ ವೈ.ಎಸ್.ವಿ. ದತ್ತ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಮಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಜಿಲ್ಲೆಯ ಮೂವರು ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ರಾಜ್ಯ ಗಮಕಕಲಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವ ಸಮಿತಿ, ಮಹಾನಗರ ಪಾಲಿಕೆ ಹಾಗೂ ರಾಜ್ಯ ಗಮಕಕಲಾ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಂದು ಬೆಳಿಗ್ಗೆ 9.30ರಿಂದ ಸಂಜೆ 7ರವರೆಗೆ, ಬಾಲರಾಜ ಅರಸ್ ರಸ್ತೆಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾಲೇಜ್ ಆಫ್ ಅಪ್ಲೈಡ್ ಸೈನ್ಸಸ್ನ ಮಹಾಕವಿ ಕುವೆಂಪು ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಗಮಕಕಲಾ ಪರಿಷತ್ತಿನ ಗೌರವಾಧ್ಯಕ್ಷ ಎಸ್.ಆರ್. ಅಶ್ವತ್ಥನಾರಾಯಣ ಶೆಟ್ಟಿ ಹಾಗೂ ಅಧ್ಯಕ್ಷ ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಉಪಸ್ಥಿತರಿರುವರು.
ಗಮಕ ವಾಚನ, ವಿಚಾರಗೋಷ್ಠಿ
ಬೆಳಿಗ್ಗೆ 10.30ಕ್ಕೆ ನಡೆಯುವ ಗಮಕ ವಾಚನ–ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಡಾ. ಸನತ್ ಕುಮಾರ್ ವಾಚನ ಮಾಡಲಿದ್ದು, ವೈ.ಎಸ್.ವಿ. ದತ್ತ ವ್ಯಾಖ್ಯಾನ ನೀಡುವರು. ಬೆಳಿಗ್ಗೆ 11.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ರಾಮಸುಬ್ರಾಯ ಶೇಟ್ ಅವರು ‘ಗಮಕದ ಪ್ರಚಾರ ಹೇಗೆ?’ ವಿಷಯವಾಗಿ ಮಾತನಾಡುವರು. ತುರುವನೂರು ಮಲ್ಲಿಕಾರ್ಜುನ ಅವರು ವಚನ ಸಾಹಿತ್ಯದ ಕುರಿತು ವಿಚಾರ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಟಿ.ಜೆ. ನಾಗರತ್ನಾ ಮತ್ತು ತನ್ಮಯೀ ಅವರಿಂದ ವಚನಗಾಯನ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಶ್ರೀಲಕ್ಷ್ಮೀ ಶಾಸ್ತ್ರೀ ಮತ್ತು ತಂಡದವರಿಂದ ಗಮಕ–ನೃತ್ಯರೂಪಕ ಪ್ರದರ್ಶನ ನಡೆಯಲಿದೆ. ಸಂಜೆ 4 ಗಂಟೆಗೆ ಕವಿ–ಕಾವ್ಯ ಪರಿಚಯ ಗೋಷ್ಠಿ ಆಯೋಜಿಸಲಾಗಿದ್ದು, ಡಾ. ಎ.ಎಸ್. ವತ್ಸಲಾ ಅವರು ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ಕುರಿತು ಮಾತನಾಡುವರು.
ಸಂಜೆ 5 ಗಂಟೆಗೆ ಪ್ರಸಾದ ಭಾರದ್ವಾಜ್ ಅವರ ಗಮಕ ವಾಚನ ನಡೆಯಲಿದ್ದು, ಸಾಗರದ ಡಾ. ವಸುಮತಿ ಗೌಡ ವ್ಯಾಖ್ಯಾನ ನೀಡುವರು.
ರಾಜ್ಯಮಟ್ಟದ ಸ್ಪರ್ಧೆ, ಕಲಾವಿದರಿಗೆ ಸನ್ಮಾನ
ಗಮಕ ದಸರಾ ಅಂಗವಾಗಿ ರಾಜ್ಯಮಟ್ಟದ ಗಮಕ ವಾಚನ ಸ್ಪರ್ಧೆ, ಉದಯೋನ್ಮುಖ ಗಮಕಿಗಳ ವಾಚನ–ವ್ಯಾಖ್ಯಾನ ಹಾಗೂ ಗಮಕ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯುವ ಗಮಕಿಗಳ ವಾಚನಕ್ಕೆ ಮತ್ತೂರಿನ ವೇ. ಶ್ರೀ ಕೇಶವ ಅವಧಾನಿ ವ್ಯಾಖ್ಯಾನ ನೀಡುವರು ಎಂದು ಆಯೋಜಕರು ತಿಳಿಸಿದ್ದಾರೆ.
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಸಿಂಡಿಕೇಟ್ ಸದಸ್ಯ ಡಾ. ಕೆ.ಎನ್. ಚಿದಾನಂದ ಸಮಾರೋಪ ಭಾಷಣ ಮಾಡುವರು. ಹಿರಿಯ ವ್ಯಾಖ್ಯಾನಕಾರ ಕಲಾಶ್ರೀ ಹೊಸಹಳ್ಳಿ ಗೋಪಾಲ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಉಪಸ್ಥಿತರಿರುವರು.
ಗಮಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜಿಲ್ಲೆಯ ಕಲಾವಿದರಾದ ತಾರಾ ಪ್ರಸಾದ್, ನರಹರಿ ಶರ್ಮಾ ಮತ್ತು ಕಾಮಾಕ್ಷಮ್ಮ ಜಗನ್ನಾಥ ಶಾಸ್ತ್ರಿ ಅವರನ್ನು ಸನ್ಮಾನಿಸಲಾಗುವುದು ಎಂದು ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗಮಕಕಲಾ ಪರಿಷತ್ತಿನ ಗೌರವಾಧ್ಯಕ್ಷ ಅಶ್ವತ್ಥನಾರಾಯಣ ಶೆಟ್ಟಿ ಸೇರಿದಂತೆ ನಾಗರಾಜ್, ವತ್ಸಲಾ, ತಾರಾ ಪ್ರಸಾದ್, ಹರಿಪ್ರಸಾದ್ ಹಾಗೂ ಕುಮಾರ ಶಾಸ್ತ್ರಿ ಉಪಸ್ಥಿತರಿದ್ದರು.
Shivamogga Gamaka Dasara 2026 will be held on October 16 with recitations, interpretations, discussions, a dance presentation and competitions. Y.S.V. Datta will inaugurate the event, and three artists will be honoured for their contributions to Gamaka.



More Stories
ಶಿವಮೊಗ್ಗ ಸಿನಿ ದಸರಾ ಅ.14ಕ್ಕೆ: ಕಿರುಚಿತ್ರ ಪ್ರದರ್ಶನ, ಸಾಧಕರಿಗೆ ಸನ್ಮಾನ
ಸಾಹಿತ್ಯ ಸಂಭ್ರಮ: ಮುಂದಿನ ವರ್ಷ ಅದ್ದೂರಿ ಸಾಹಿತ್ಯ ಸಮ್ಮೇಳನ, ಚನ್ನಬಸಪ್ಪ
ಶಿವಮೊಗ್ಗ ಮಹಿಳಾ ದಸರಾ ಸಮಾರೋಪ ಅ.13ಕ್ಕೆ: ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ