AI-Vartha.in

ನಿಖರ ಸುದ್ದಿ, ನೇರ ವರದಿ

ಮೆಗ್ಗಾನ್ ಆಸ್ಪತ್ರೆ ಅಧಿಕಾರಿಗಳ ಚೇಂಬರ್ ಸೀನ್‌ ನೋಡಿದ ನಾಗಲಕ್ಷ್ಮಿ ಚೌಧರಿ ರೊಚ್ಚಿಗೆದ್ದಿದ್ದೇಕೆ? ವೈದ್ಯರಿಗೆ ಬೆವರಿಳಿಸಿದ ಆ ಪ್ರಶ್ನೆ!

ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 12: ನಗರದ ಪ್ರಸಿದ್ಧ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇಂದು ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳಾ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಆಸ್ಪತ್ರೆಯ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳಲ್ಲಿ ಕಂಡುಬಂದ ಲೋಪದೋಷಗಳನ್ನು ಕಂಡು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಹಿಳಾ ಜನರಲ್ ವಾರ್ಡ್‌ಗೆ ಭೇಟಿ ನೀಡಿದ ವೇಳೆ ರೋಗಿಗಳಿಂದಲೇ ಸಾಲು ಸಾಲು ದೂರುಗಳು ಕೇಳಿಬಂದವು. 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಹಾಲಕೊಳ್ಳಿಯ ಸುನಿತಾ, ಗೋಂದಿ ಚಟ್ನಹಳ್ಳಿಯ ಗಾಯಿತ್ರಿ ಹಾಗೂ ಮೀನಾಕ್ಷಿ ಸೇರಿದಂತೆ ಹಲವು ರೋಗಿಗಳು, ಆಸ್ಪತ್ರೆಯಲ್ಲಿ ಸಿಗಬೇಕಾದ ಔಷಧಿಗಳನ್ನು ಹೊರಗಡೆಯಿಂದ ತರಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಈ ಬಗ್ಗೆ ಗಂಭೀರವಾಗಿ ಸ್ಪಂದಿಸಿದ ಅಧ್ಯಕ್ಷರು, “ಆಸ್ಪತ್ರೆಯಲ್ಲಿ ಈ-ಫಾರ್ಮಸಿ ಹಾಗೂ ಡಿಜಿಟಲ್ ವ್ಯವಸ್ಥೆ ಇರುವಾಗ ರೋಗಿಗಳು ಹೊರಗಡೆ ಔಷಧಿ ಖರೀದಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗುತ್ತಿದೆ? ಯಾವ ಔಷಧಿ ಬರೆಯಲಾಗಿದೆ, ವಿತರಿಸಲಾಗಿದೆಯೇ ಎಂಬುದು ಪಾರದರ್ಶಕವಾಗಿ ಡಿಜಿಟಲ್‌ನಲ್ಲಿ ದಾಖಲಾಗಬೇಕು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಶೌಚಾಲಯ ಸ್ವಚ್ಛತೆ ಹಾಗೂ ನೀರಿನ ಕೊರತೆಯ ಬಗ್ಗೆ ಮಾಧ್ಯಮದವರು ಗಮನಸೆಳೆದಾಗ ಅಧಿಕಾರಿಗಳ ವಿರುದ್ಧ ತೀವ್ರ ಕಿಡಿಕಾರಿದ ನಾಗಲಕ್ಷ್ಮಿ ಚೌಧರಿ, “ರೋಗಿಗಳಿಗೆ ಕುಡಿಯುವ ನೀರು, ಸ್ವಚ್ಛ ಶೌಚಾಲಯ ಕಲ್ಪಿಸುವುದು ಆಸ್ಪತ್ರೆಯ ಮೂಲಭೂತ ಕರ್ತವ್ಯ. ನಿಮ್ಮ ಸಿಬ್ಬಂದಿ ಕಚೇರಿ ಅಥವಾ ಚೇಂಬರ್‌ನಲ್ಲಿ ಇಂತಹ ನೀರಿನ ಸಮಸ್ಯೆ ಎದುರಾದರೆ ಸುಮ್ಮನೆ ಇರುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿ ಬೆವರಿಳಿಸಿದರು. ವಾರ್ಡ್‌ಗಳಲ್ಲಿ ಮುರಿದ ಕಿಟಕಿಗಳು, ಧೂಳು ಹಾಗೂ ಜೇಡರ ಬಲೆಗಳನ್ನು ಕಂಡು ಅಧಿಕಾರಿಗಳ ಮೇಲ್ವಿಚಾರಣೆ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೆ, ಎಪಿಎಲ್ ಕಾರ್ಡ್ ಕಾರಣದಿಂದ ಡಯಾಲಿಸಿಸ್ ಚಿಕಿತ್ಸೆಗೆ ಹಣ ಕೇಳಲಾಗಿದೆ ಎಂಬ ರೇಣುಕಾ ಎಂಬ ರೋಗಿಯ ಸಂಬಂಧಿಕರ ದೂರಿನ ಕುರಿತು ಮಾತನಾಡಿದ ಅವರು, ಬಡ ರೋಗಿಗಳಿಗೆ ಮಾನವೀಯತೆಯಿಂದ ನೆರವಾಗಬೇಕು ಎಂದರು. ಯಾವುದೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಸಾಕ್ಷ್ಯ ಅಗತ್ಯವಿದ್ದು, ದೂರುಗಳು ಮರುಕಳಿಸದಂತೆ ವ್ಯವಸ್ಥೆ ಬಲಪಡಿಸಲು ಸೂಚಿಸಿದರು.

ಬಳಿಕ, ತಾಯಿ ಮತ್ತು ಮಗುವಿನ ಆಸ್ಪತ್ರೆಗೂ ಭೇಟಿ ನೀಡಿದ ಅಧ್ಯಕ್ಷರು, ಗರ್ಭಿಣಿಯರಿಗೆ ರಸೀದಿಗಾಗಿ ದೀರ್ಘ ಸಾಲಿನಲ್ಲಿ ನಿಲ್ಲುವ ತೊಂದರೆಯಾಗದಂತೆ ಹೆಚ್ಚುವರಿ ಕೌಂಟರ್‌ಗಳ ಸೌಲಭ್ಯ ಸುಧಾರಿಸಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿದರು.

Karnataka State Commission for Women Chairperson Nagalakshmi Chaudhary inspected the Government Meggan Hospital in Shivamogga. She strongly pull up hospital officials over poor sanitation, lack of drinking water, damaged infrastructure, and complaints of patients buying medicines from outside.