ಶಿವಮೊಗ್ಗ, ಸೆಪ್ಟೆಂಬರ್ 02: ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆಯೆನ್ನಲಾದ ಅಕ್ರಮ ಗೋಸಾಗಾಟ, ಗೋಹತ್ಯೆ ಹಾಗೂ ಅಕ್ರಮ ಗೋಮಾಂಸ ಮಾರಾಟ ಮಾಡುವ ಹೋಟೆಲ್ಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಅವುಗಳನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.
ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ಕುರಿತು ಪೊಲೀಸ್ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಲಾಗಿದ್ದು, ಪ್ರಕರಣಗಳೂ ದಾಖಲಾಗಿವೆ. ಆದರೆ ಕಳೆದ ಆರು ತಿಂಗಳಿನಿಂದ ಅಕ್ರಮ ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೇದಿಕೆ ಆರೋಪಿಸಿದೆ.
ವಿವಿಧ ಪ್ರದೇಶಗಳಲ್ಲಿ ಅಕ್ರಮ ಕಸಾಯಿಖಾನೆಗಳ ಕಾರ್ಯಾಚರಣೆ ಆರೋಪ
ಭದ್ರಾವತಿ, ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಅಕ್ರಮ ಗೋವಿನ ಕಸಾಯಿಖಾನೆಗಳು ಹಾಗೂ ಗೋಮಾಂಸದ ಹೋಟೆಲ್ಗಳು ನಿರಂತರವಾಗಿ ನಡೆಯುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ವರ್ ಕಾಲೋನಿ, ಖಾಜಿ ಮೊಹಲ್ಲಾ, ಸೈಯದ್ ಕಾಲೋನಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಡ್ರಹಳ್ಳಿ, ದೊಣಬಘಟ್ಟ, ತಡಸ, ವೀರಾಪುರ, ತಿಪ್ಲಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎಂದು ವೇದಿಕೆ ಪ್ರಸ್ತಾಪಿಸಿದೆ.
ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಬೇಕಾದ ಕೆಲವು ಅಧಿಕಾರಿಗಳು ಅಕ್ರಮ ಚಟುವಟಿಕೆ ನಡೆಸುವವರೊಂದಿಗೆ ಶಾಮೀಲಾಗಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿರುವ ವೇದಿಕೆಯು, ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಕಸಾಯಿಖಾನೆಗಳ ಎದುರು ಧರಣಿ ನಡೆಸುವ ಎಚ್ಚರಿಕೆ
ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ತಡೆಯಲು ಭದ್ರಾವತಿ, ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳ ವ್ಯಾಪ್ತಿಯಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಂಡು ಕಸಾಯಿಖಾನೆಗಳನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಅಕ್ರಮ ಕಸಾಯಿಖಾನೆಗಳ ಮುಂಭಾಗದಲ್ಲೇ ಧರಣಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ.
ಮಹಾನಗರ ಪಾಲಿಕೆಗೂ ಮನವಿ

ಶಿವಮೊಗ್ಗ ನಗರದಲ್ಲಿ ಅಕ್ರಮ ಗೋವಿನ ಕಸಾಯಿಖಾನೆಗಳು ಮತ್ತು ಗೋಮಾಂಸದ ಹೋಟೆಲ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೂ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿ ಗೋವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಎನ್. ಅವರು ಈ ಮನವಿಗಳನ್ನು ಹಸ್ತಾಂತರಿಸಿದ್ದಾರೆ.
Hindu Jagarana Vedike has submitted memorandums to the Shimoga District Police and Mahanagara Palike demanding immediate legal action against illegal cattle transport, slaughtering, and illegal beef joints in Shivamogga, Bhadravathi, and Shikaripura. District Co-Convener Shivakumar N. warned of staging protests in front of illegal slaughterhouses if authorities fail to shut them down.



More Stories
ಶಿವಮೊಗ್ಗದಲ್ಲಿ ಮಾದಕ ದ್ರವ್ಯ ವಿರೋಧಿ ರಾಷ್ಟ್ರೀಯ ಬೈಕ್ ಜಾಥಾಕ್ಕೆ ಸ್ವಾಗತ
ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆರಂಭ
‘ಬಾಗಿಲಿಗೆ ಬಂತು ಸರ್ಕಾರ’ ಅಭಿಯಾನ: ಶಾಸಕಿ ಶಾರದಾ ಪೂರ್ಯನಾಯ್ಕ ಅಧ್ಯಕ್ಷತೆ