AI-Vartha.in

ನಿಖರ ಸುದ್ದಿ, ನೇರ ವರದಿ

ಸೂಡಾ ನೂತನ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ಅಧಿಕಾರ ಸ್ವೀಕಾರ: ಶಿವಮೊಗ್ಗ-ಭದ್ರಾವತಿ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆಯ ಭರವಸೆ

ಸೂಡಾ ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ಅಧಿಕಾರ ಸ್ವೀಕಾರ – SUDA president C.G. Madhusudan takes charge, Shivamogga

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ದ ನೂತನ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ನಗರದ ಸೂಡಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ನೂರಾರು ಮಂದಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರ ಮತ್ತು ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ಧಕ್ಕೆಯಾಗದಂತೆ ಅವಳಿನಗರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ” ಎಂದು ಭರವಸೆ ನೀಡಿದರು.

ತಮ್ಮ ರಾಜಕೀಯ ಹಾದಿಯನ್ನು ಮೆಲುಕು ಹಾಕಿದ ಮಧುಸೂದನ್, ಚಿಕ್ಕ ವಯಸ್ಸಿನಲ್ಲೇ ಎನ್‌ಎಸ್‌ಯುಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾಗಿ ತಿಳಿಸಿದರು. ತಾವು ಸರ್ಕಾರಿ ಹುದ್ದೆಗೆ ಹೋಗಬೇಕೆಂಬುದು ತಂದೆ-ತಾಯಿಯ ಆಸೆಯಾಗಿತ್ತು. ಆದರೆ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿ, ಪ್ರಕರಣಗಳ ಕಾರಣಕ್ಕೆ ಓಡಾಡುವಾಗ ಅವರು ಬೇಸರ ಪಟ್ಟಿದ್ದರು. “ಇಂದು ಅವರಲ್ಲಿ ಕಂಡ ಸಂತಸ ನನ್ನ ಬದುಕಿಗೆ ಸಮಾಧಾನ ತಂದಿದೆ” ಎಂದು ಭಾವುಕರಾದರು.

“ಈ ಹುದ್ದೆ ನನಗೆ ಸುಲಭವಾಗಿ ಸಿಕ್ಕಿರಬಹುದು, ಆದರೆ ಇದರ ಹಿಂದೆ ದೊಡ್ಡ ಶ್ರಮವಿದೆ. ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ, ಪಕ್ಷ ಸಂಘಟನೆಗೆ ದುಡಿದವರಿಗೆ ಪ್ರತಿಫಲ ಇದ್ದೇ ಇದೆ ಎನ್ನುವುದಕ್ಕೆ ನಾನೇ ಸಾಕ್ಷಿ” ಎಂದ ಅವರು, ಈ ಹುದ್ದೆಯನ್ನು ಜನಮುಖಿಯಾಗಿ ಮತ್ತು ಪಕ್ಷದ ಯುವಕರಿಗೆ ಸ್ಫೂರ್ತಿಯಾಗುವಂತೆ ಬಳಸಿಕೊಳ್ಳುವುದಾಗಿ ಹೇಳಿದರು.

ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಮಾತನಾಡಿ, ತಾವು ಎನ್‌ಎಸ್‌ಯುಐ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಮಧುಸೂದನ್ ಅವರೇ ಕಾರಣ ಎಂದರು. ಅವರಿಗೆ ಹುದ್ದೆ ಸಿಗಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು, ಈಗ ಅದು ನೀಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಅವರು, ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು ಎಂಬುದು ರಾಹುಲ್ ಗಾಂಧಿ ಅವರ ಆಶಯ, ಅದು ಶಿವಮೊಗ್ಗದಿಂದಲೇ ಪ್ರಾರಂಭವಾಗಿದೆ ಎಂದರು. ಚೇತನ್ ಗೌಡ, ಹೆಚ್.ಸಿ. ಯೋಗೇಶ್ ಅವರ ನಂತರ ಮಧುಸೂದನ್ ಅವರಿಗೂ ಪ್ರಮುಖ ಹುದ್ದೆ ದೊರೆತಿದ್ದು, ಯುವಕರಿಗೆ ದೊಡ್ಡ ಸಂದೇಶ ರವಾನೆಯಾಗಿದೆ ಎಂದು ಹೇಳಿದರು.

ಮಾಜಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಖಾನ್ ಅವರು, ಯುವಶಕ್ತಿಯೇ ಪಕ್ಷದ ದೊಡ್ಡ ಆಸ್ತಿ, ಅದನ್ನು ಪಕ್ಷ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಭದ್ರಾವತಿ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಸಿ.ಎಂ. ಖಾದರ್ ಮಾತನಾಡಿ, ಪಕ್ಷಕ್ಕಾಗಿ ದುಡಿದವರನ್ನು ಕಾಂಗ್ರೆಸ್ ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ಈ ನೇಮಕವೇ ಸಾಕ್ಷಿ ಎಂದರು. ಇದರ ಹಿಂದೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್, ಯುವ ನಾಯಕರಾದ ಬಸವೇಶ್ ಮತ್ತು ಗಣೇಶ್ ಅವರ ಶ್ರಮವಿದೆ ಎಂದು ಅಭಿನಂದಿಸಿದರು.

ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಸೂಡಾ ಕಚೇರಿವರೆಗೆ ಬೈಕ್ ರ‍್ಯಾಲಿ ಮೂಲಕ ಮಧುಸೂದನ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಎನ್‌ಎಸ್‌ಯುಐ ಕಾರ್ಯಕರ್ತರು ಬಾವುಟ ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಸೂಡಾ ಕಚೇರಿ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಎಸ್. ರವಿಕುಮಾರ್, ಬಿ.ಎಸ್. ಬಸವೇಶ್, ಧೀರರಾಜ್ ಹೊನ್ನವಿಲೆ, ಎಸ್.ಪಿ. ಶೇಷಾದ್ರಿ, ಎಂ.ಎಸ್. ಸಿದ್ದಪ್ಪ, ನೇತ್ರಾವತಿ ಗೌಡ, ತಂಗರಾಜ್, ಗಿರೀಶ್ ಬುಕ್ಲಾಪುರ, ವೈ. ತಿಮ್ಮರಾಜು, ವೀರೇಶ್ ಕ್ಯಾತಿನಕೊಪ್ಪ, ಹಾಲೇಶ್, ಚರಣ್, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.