AI-Vartha.in

ನಿಖರ ಸುದ್ದಿ, ನೇರ ವರದಿ

ತೀರ್ಥಹಳ್ಳಿ: ಫಾರೆಸ್ಟ್ ವಾಚರ್ ತೋಟದ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ನಾಟಾ ಜಪ್ತಿ!

Forest officials seize illegal timber logs from Forest Watcher home in Thirthahalli

‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ – ಅರಣ್ಯ ಸಂರಕ್ಷಣೆಯ ಜವಾಬ್ದಾರಿ ಹೊರಬೇಕಾದ ಅರಣ್ಯ ಇಲಾಖೆಯ ವಾಚರ್ ಮನೆ ಮೇಲೆಯೇ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮರದ ನಾಟಾಗಳನ್ನು ವಶಪಡಿಸಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಮುಂಡುವಳ್ಳಿ ಗ್ರಾಮದ ಶಾಂತಿಕೆರೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಮೃಗವಧೆ ಮೀಸಲು ಅರಣ್ಯದ ಸರ್ವೇ ನಂ.188ರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ನಾಟಾಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗದ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಎಂಪಿಎಂ ನೋಡುತೋಪಿನ ಅರಣ್ಯ ವಲಯದ ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ಅವರ ತೋಟದ ಮನೆಯಲ್ಲೇ ಅಕ್ರಮವಾಗಿ ಬಚ್ಚಿಡಲಾಗಿದ್ದ ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ನಾನಾ ಜಾತಿಯ ಬೃಹತ್ ನಾಟಾಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ಜಪ್ತಿ ಮಾಡಿದ್ದಾರೆ.

ಡಿಆರ್‌ಎಫ್‌ಒ ಶಾಮೀಲು ಆರೋಪ:

ಈ ಅಕ್ರಮ ದಂಧೆಯಲ್ಲಿ ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾಗೆ ಉಪ ವಲಯ ಅರಣ್ಯಾಧಿಕಾರಿ (DRFO) ಹರೀಶ್ ನಾಯ್ಕ್ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರೂ ಸೇರಿ ದೀರ್ಘಕಾಲದಿಂದ ಅರಣ್ಯ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ, ಎಂಪಿಎಂಗೆ ಸೇರಿದ ಸುಮಾರು 10 ಎಕರೆಗೂ ಅಧಿಕ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ತೋಟ ಮಾಡಲಾಗಿದೆ ಎಂಬ ದೂರನ್ನೂ ಸ್ಥಳೀಯರು ನೀಡಿದ್ದಾರೆ.

ಬೇನಾಮಿ ಗುತ್ತಿಗೆ ಹಾಗೂ ಅಧಿಕಾರ ದುರ್ಬಳಕೆ:

ಡಿಆರ್‌ಎಫ್‌ಒ ಹರೀಶ್ ನಾಯ್ಕ್ ಅವರು ಅರಣ್ಯ ಇಲಾಖೆಯ ವಿವಿಧ ಕಾಮಗಾರಿಗಳನ್ನು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಪಡೆದು ನಿಯಮ ಉಲ್ಲಂಘಿಸಿದ್ದಾರೆ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಚಾಟಿ ಬೀಸಿದ್ದಾರೆ. ಈ ಕುರಿತು ಈಗಾಗಲೇ ಶಿವಮೊಗ್ಗ ಡಿಎಫ್‌ಒ ಅವರಿಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ.

ಕಠಿಣ ಕ್ರಮಕ್ಕೆ ಆಗ್ರಹ:

ಅರಣ್ಯ ಕಾಯುವ ಸಿಬ್ಬಂದಿಯೇ ಈ ರೀತಿಯ ಅಕ್ರಮದಲ್ಲಿ ಭಾಗಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಬಲವಾಗಿ ಆಗ್ರಹಿಸಿದ್ದಾರೆ.


In a raid conducted by mobile forest squad officers at Munduvalli near Thirthahalli, illegal timber logs worth lakhs were seized from the estate house of Forest Watcher Philip D’Souza. Locals have alleged that DRFO Harish Naik co-operated in this illegal business and demanded a thorough investigation into forest land encroachment and abuse of power.