ಆನಂದಪುರ: ತಾಲೂಕಿನ ಗೌತಮಪುರ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹2.10 ಲಕ್ಷ ಮೌಲ್ಯದ 16.4 ಕೆ.ಜಿ. ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಸಾಗರ ವೃತ್ತ ಪೊಲೀಸ್ ನಿರೀಕ್ಷಕ ಸಂತೋಷ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಆಗಸ್ಟ್ 14ರಂದು ಸಂಜೆ 6 ಗಂಟೆ ಸುಮಾರಿಗೆ ಗೌತಮಪುರ ಗ್ರಾಮದ ತೋಟದ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆಹಚ್ಚಿದ್ದಾರೆ.
ಕಾರ್ಯಾಚರಣೆಯಲ್ಲಿ ಬಸವರಾಜ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾರಾಟ ಮಾಡುವ ಉದ್ದೇಶದಿಂದ ಬೆಳೆದಿದ್ದ ಎಲೆ, ಹೂವು, ಮೊಗ್ಗು ಹಾಗೂ ಕಾಂಡಗಳನ್ನೊಳಗೊಂಡ ಒಟ್ಟು 16,400 ಗ್ರಾಂ (16.4 ಕೆ.ಜಿ.) ಹಸಿ ಗಾಂಜಾ ಜಪ್ತಿ ಮಾಡಲಾಗಿದೆ. ಇದರ ಅಂದಾಜು ಮೌಲ್ಯ ₹2,10,000 ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಗೌತಮಪುರ ಗ್ರಾಮದ ಬಸವರಾಜ (45), ತಂದೆ ಸಣ್ಣಪ್ಪ, ಕೃಷಿಕ ಹಾಗೂ ಕುಮಾರ (47), ತಂದೆ ಮಂಜಪ್ಪ, ಕೃಷಿಕ ಅವರನ್ನು ಆರೋಪಿಗಳೆಂದು ದಾಖಲಿಸಲಾಗಿದೆ. ಬಸವರಾಜನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಕುಮಾರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಕ್ರಮ ಗಾಂಜಾ ಬೆಳೆ ಹಾಗೂ ಮಾದಕ ವಸ್ತುಗಳ ವಿರುದ್ಧ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಗಾಂಜಾ ಬೆಳೆ ಪತ್ತೆಹಚ್ಚಿ, ದೊಡ್ಡ ಪ್ರಮಾಣದ ಹಸಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಸಾಗರ ಸಹಾಯಕ ಪೊಲೀಸ್ ಅಧೀಕ್ಷಕ ಬೆನಕ ಪ್ರಸಾದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಎಎಸ್ಐ ಹಾಲಪ್ಪ, ಸಿಬ್ಬಂದಿಗಳಾದ ಪರಶುರಾಮ್, ಪ್ರಶಾಂತ್, ನಿರಂಜನ್, ನೂತನ್, ಸತೀಶ್, ಸುನಿಲ್, ಗಿರೀಶ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



More Stories
ಶಿವಮೊಗ್ಗ ಕೋಟೆ ಆಂಜನೇಯ ದೇವಸ್ಥಾನಕ್ಕೆ ಹೆಬ್ಬಾಗಿಲು ನಿರ್ಮಿಸಲು ಮನವಿ
ಕುವೆಂಪು ವಿವಿ ಗೊಂದಲ ನಿವಾರಣೆಯಾಗಲಿದೆ ಎಂದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ
ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾಮಟ್ಟದ ಗಾಯನ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ಭಾಗಿ