ಶಿವಮೊಗ್ಗ, ಆಗಸ್ಟ್ 21 ದೋಷಯುಕ್ತ ಮೊಬೈಲ್ ಫೋನ್ ಮಾರಾಟ ಮಾಡಿ ಸೇವಾ ನ್ಯೂನತೆ ಎಸಗಿದ ಮೊಬೈಲ್ ಕಂಪನಿ ಹಾಗೂ ಮಾರಾಟಗಾರರು ಗ್ರಾಹಕನಿಗೆ ಮೊಬೈಲ್‌ನ ಖರೀದಿ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸುವುದರ ಜೊತೆಗೆ ಒಟ್ಟು ₹15,000 ಪರಿಹಾರ ಮತ್ತು ಖರ್ಚು-ವೆಚ್ಚ ಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಶಿವಮೊಗ್ಗದ ಗೋಪಾಳ ನಿವಾಸಿ ಮಂಜುನಾಥ ಜೆ.ವಿ. ಅವರು ನಗರದ ನೆಹರು ರಸ್ತೆಯಲ್ಲಿರುವ ‘—- ಸೆಂಟರ್ ಆಂಡ್ ಎಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ ₹1,650ಕ್ಕೆ ಐಟೆಲ್ ಪಿ450 ಮೊಬೈಲ್ ಖರೀದಿಸಿದ್ದರು. ಖರೀದಿಸಿದ ಒಂದು ತಿಂಗಳೊಳಗೇ ಮೊಬೈಲ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು.
ದೋಷ ನಿವಾರಣೆಗೆ ಮಾರಾಟಗಾರರು ಚಾರ್ಜರ್ ಬದಲಾಯಿಸಿಕೊಟ್ಟಿದ್ದರೂ ಸಮಸ್ಯೆ ಬಗೆಹರಿಯಲಿಲ್ಲ. ಹಲವು ಬಾರಿ ಮನವಿ ಮಾಡಿದರೂ ಮೊಬೈಲ್ ದುರಸ್ತಿ ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರಾಹಕರು 2026ರ ಫೆಬ್ರವರಿ 27ರಂದು ಲಿಖಿತವಾಗಿ ಮನವಿ ಸಲ್ಲಿಸಿದ್ದರು. ಆದರೂ ಸಮಸ್ಯೆ ಪರಿಹರಿಸದ ಹಿನ್ನೆಲೆಯಲ್ಲಿ ಐಟೆಲ್ ಮೊಬೈಲ್ ಕಂಪನಿ ಹಾಗೂ ಸ್ಥಳೀಯ ಮಾರಾಟಗಾರರ ವಿರುದ್ಧ ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದಿಂದ ನೋಟಿಸ್ ಜಾರಿಯಾಗಿದ್ದರೂ ಎದುರುದಾರರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಏಕಪಕ್ಷೀಯವಾಗಿ ವಿಚಾರಣೆ ನಡೆಸಲಾಯಿತು. ದೂರುದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಸೇವಾ ನ್ಯೂನತೆ ಎಸಗಿರುವುದನ್ನು ಪರಿಗಣಿಸಿ ಆದೇಶ ನೀಡಿದೆ.
ಆಯೋಗದ ಪ್ರಮುಖ ಆದೇಶಗಳು
- ಮೊಬೈಲ್‌ನ ₹1,650 ಮೂಲ ಬೆಲೆಯನ್ನು 27-02-2026ರಿಂದ ವಾರ್ಷಿಕ ಶೇ.7ರ ಬಡ್ಡಿಯೊಂದಿಗೆ 45 ದಿನಗಳೊಳಗೆ ದೂರುದಾರರಿಗೆ ಮರುಪಾವತಿಸಬೇಕು.
- ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ವಾರ್ಷಿಕ ಶೇ.10ರ ಬಡ್ಡಿ ಅನ್ವಯವಾಗಲಿದೆ.
- ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗಾಗಿ ₹5,000 ಪರಿಹಾರ ನೀಡಬೇಕು.
- ದೂರು ಸಲ್ಲಿಸಲು ಉಂಟಾದ ಖರ್ಚು-ವೆಚ್ಚಕ್ಕಾಗಿ ₹10,000 ಪಾವತಿಸಬೇಕು.
- ಈ ಮೊತ್ತವನ್ನು 45 ದಿನಗಳೊಳಗೆ ಪಾವತಿಸದಿದ್ದಲ್ಲಿ ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸಬೇಕು.
- ಆದೇಶವಾದ 45 ದಿನಗಳೊಳಗೆ ದೂರುದಾರರು ಮೊಬೈಲ್ ಫೋನ್ ಅನ್ನು ಎದುರುದಾರರಿಗೆ ಹಸ್ತಾಂತರಿಸಬೇಕು.
The Shivamogga District Consumer Disputes Redressal Commission has directed a mobile company and seller to refund ₹1,650 with interest and pay ₹15,000 towards compensation and litigation costs after a defective Itel P450 phone was sold to a consumer.



More Stories
ಶಿವಮೊಗ್ಗ ವಿದ್ಯುತ್ ವ್ಯತ್ಯಯ: ಅ.15ರಂದು ಹಲವು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ವಿಶ್ವ ಕೌಶಲ್ಯ ಸ್ಪರ್ಧೆ 2026: ಶಿವಮೊಗ್ಗದಲ್ಲಿ ಅರ್ಜಿ ಆಹ್ವಾನ
ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ವಶಕ್ಕೆ