ಶಿವಮೊಗ್ಗ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾರಿಕಾಂಬ ದೇವಿಯ ಸ್ಥಿರ ಮೂರ್ತಿ ಅಷ್ಟಬಂಧ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಳಶೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿವಮೊಗ್ಗ: ಭಯ, ಭಕ್ತಿ ಹಾಗೂ ಶ್ರದ್ಧೆಯ ಆರಾಧನೆಯಿಂದ ಭಗವಂತ ನಮ್ಮನ್ನು ಸದಾ ಅನುಗ್ರಹಿಸಿ ಆಯುರಾರೋಗ್ಯ ಕಲ್ಪಿಸುತ್ತಾನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಶಿವಮೊಗ್ಗ ತಾಲೂಕು ಹಾಯ್ ಹೊಳೆ ಅಂಚೆಯ ಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿತವಾದ ಶ್ರೀ ಮಾರಿಕಾಂಬ ದೇವಿಯ ಸ್ಥಿರ ಮೂರ್ತಿ ಅಷ್ಟಬಂಧ ಪ್ರತಿಷ್ಠೆ ಹಾಗೂ 48 ದಿನಗಳ ಸಹಿತ ಬ್ರಹ್ಮಕಳಶೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಧ್ಯಾಹ್ನ ಸಾನಿಧ್ಯ ವಹಿಸಿ, ಶ್ರೀ ದೇವಿಯನ್ನು ಆರಾಧಿಸಿದ ಬಳಿಕ ಅವರು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಸೇವಾ ಮನೋಭಾವದಿಂದ ಸಮಾಜದಲ್ಲಿ ಶಾಂತಿ-ಸಮೃದ್ಧಿ: ಮಾರಿಕಾಂಬ ತಾಯಿಯ ಅನುಗ್ರಹಕ್ಕೆ ನಮ್ಮಲ್ಲಿ ನಂಬಿಕೆಯ ಮನಸ್ಸಿರಬೇಕು. ನಂಬಿಕೆ ಹಾಗೂ ಶ್ರದ್ಧೆಯ ಭಕ್ತಿ ಖಂಡಿತವಾಗಿಯೂ ತಾಯಿಯ ಕೃಪೆಗೆ ನಮ್ಮನ್ನು ಪಾತ್ರರನ್ನಾಗಿ ಮಾಡುತ್ತದೆ. ಕೇವಲ ದೇವಸ್ಥಾನದ ಉದ್ಘಾಟನೆ ಅಥವಾ ಮೂರ್ತಿ ಪ್ರತಿಷ್ಠಾಪನೆ ಮಾಡುವುದಷ್ಟೇ ಮುಖ್ಯವಾಗುವುದಿಲ್ಲ. ದೇವಿಯ ನಿತ್ಯದ ಆರಾಧನೆಯ ಜೊತೆಗೆ ಪ್ರತಿಯೊಬ್ಬರಲ್ಲೂ ತಾಯಿಯ ಸೇವಾ ಮನೋಭಾವ ಇರಬೇಕು. ನಿತ್ಯವೂ ತಾಯಿಗೆ ಕೈಲಾದ ಭಕ್ತಿಯನ್ನು ಅರ್ಪಿಸಬೇಕು. ಆಗ ಮಾತ್ರ ಇಡೀ ಸಮಾಜ ಶಾಂತವಾಗಿ ಮತ್ತು ಸಮೃದ್ಧಿಯಾಗಿ ಇರಲು ಸಾಧ್ಯ ಎಂದರು.
ಸನಾತನ ಸಂಸ್ಕೃತಿಯಲ್ಲಿ ತಾಯಿಗೆ ಪ್ರಥಮ ಸ್ಥಾನ: ನಮ್ಮ ಸಂಸ್ಕೃತಿಯಲ್ಲಿ ನಾವು ಮೊದಲು ‘ಮಾತೃದೇವೋಭವ’ ಎಂದು ಹೇಳುತ್ತೇವೆ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲೂ ತಾಯಿಗೆ ಮೊದಲ ಆದ್ಯತೆ ಮತ್ತು ಅಗ್ರಸ್ಥಾನವಿದೆ. ಆ ನಂತರ ಪಿತೃದೇವೋಭವ, ಆಚಾರ್ಯದೇವೋಭವ ಹಾಗೂ ಅತಿಥಿದೇವೋಭವ ಎಂದು ಗೌರವಿಸುತ್ತೇವೆ. ಆ ಮಾರಿಕಾಂಬಾ ದೇವಿಯ ಪೂರ್ಣ ಅನುಗ್ರಹ ನಿಮ್ಮೆಲ್ಲರಿಗೂ ದೊರಕಲಿ ಎಂದು ಪೂಜ್ಯ ಶ್ರೀಗಳು ಆಶೀರ್ವದಿಸಿದರು.
ಧಾರ್ಮಿಕ ಕಾರ್ಯಕ್ರಮದ ವಿವರ: ಈ ಮಹತ್ಕಾರ್ಯವು ವೇದಮೂರ್ತಿ ಸುಬ್ರಹ್ಮಣ್ಯ ಹೆಬ್ಬಾರ್ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ಪ್ರಮುಖ ಉದ್ಯಮಿ ಸುರೇಶ್ ಕೆ. ಬಾಳೆಗುಂಡಿ ಅವರು ಉಸ್ತುವಾರಿ ವಹಿಸಿ ಉತ್ಸವ ಮೂರ್ತಿಯ ಸೇವಾಕರ್ತರಾಗಿದ್ದರು.
ಈ ಧಾರ್ಮಿಕ ಸಮಾರಂಭದಲ್ಲಿ ರಾಷ್ಟ್ರಭಕ್ತ ಬಳಗದ ಕೆ.ಇ. ಕಾಂತೇಶ್, ಹಿರಿಯ ಪತ್ರಕರ್ತ ಗಜೇಂದ್ರಸ್ವಾಮಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿದ್ದರು. ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಡಿ. ಮೂರ್ತಿ, ಕಾರ್ಯದರ್ಶಿ ಮನು ಕುಮಾರ್, ಶ್ರೀಧರ್, ಗೌರವಾಧ್ಯಕ್ಷ ರಾಘವೇಂದ್ರ, ಪ್ರಮುಖರಾದ ಶಿವರಾಜ್, ಡಿ. ಸತೀಶ್, ಸಮಿತಿಯ ನಿರ್ದೇಶಕರುಗಳು ಹಾಗೂ ಕಲ್ಲೂರು ಗ್ರಾಮಸ್ಥರು ಉಪಸ್ಥಿತರಿದ್ದರು.
Sri Prasannanatha Swamiji, General Secretary of Adichunchanagiri Mahasamsthana, presided over the Ashtabandha Pratishte and Brahma Kalashotsava of the newly constructed Marikamba Temple in Kalluru village, Shivamogga. Delivering his blessings, he emphasized that devout prayer, faith, and daily service bring divine blessings and harmony to society.



More Stories
ಶಿವಮೊಗ್ಗ ದಸರಾ ಜಂಬೂಸವಾರಿ ಮೊಟಕು: ಸೋಮಣ್ಣ ಆನೆ ಬೆದರಿ ಅಂಬಾರಿಗೆ ಹಾನಿ
ಆರೋಗ್ಯಕರ ಆಹಾರ ಜಾಗೃತಿ: ರೋಟರಿ ಶಿವಮೊಗ್ಗ ಮಲೆನಾಡಿನಲ್ಲಿ ಉಪನ್ಯಾಸ
ಆದಿಚುಂಚನಗಿರಿ ಶಾಖಾ ಮಠದಲ್ಲಿ ನವರಾತ್ರಿ ವಿಶೇಷ ಪೂಜೆ