ಬೆಂಗಳೂರು, ಆ.27: ಈದ್-ಮಿಲಾದ್ ಮೆರವಣಿಗೆ ವೇಳೆ ಬಸವನಗುಡಿ ಎನ್.ಆರ್. ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತ ಮುರುಳಿ ಅವರ ಮೇಲೆ ರಾಡ್ನಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ಬಳಿಕ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರು ರಸ್ತೆಯಲ್ಲೇ ಧರಣಿ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹೆಚ್ಚುವರಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಸೇರಿ ಮೂವರ ಬಂಧನ
ಕೋಮು ಸೌಹಾರ್ದತೆಗೆ ಧಕ್ಕೆ ಹಾಗೂ ಎರಡು ಗುಂಪುಗಳ ನಡುವೆ ದ್ವೇಷಕ್ಕೆ ಕಾರಣವಾಗುವ ರೀತಿಯಲ್ಲಿ ನಡೆದುಕೊಂಡ ಆರೋಪದಡಿ ಮೊದಲ ಎಫ್ಐಆರ್ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ, ಗೋಪಿ ಗೌಡ, ವಿನೋದ್ ನಾಯಕ್, ಪುನೀತ್ ಗೌಡ ಸೇರಿದಂತೆ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಪುನೀತ್ ಕೆರೆಹಳ್ಳಿ, ಗೋಪಿ ಗೌಡ ಹಾಗೂ ವಿನೋದ್ ನಾಯಕ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಯತ್ನ ಆರೋಪ: ಮೂವರ ವಿರುದ್ಧ ಪ್ರಕರಣ
ಎರಡನೇ ಪ್ರಕರಣದಲ್ಲಿ ಕೊಲೆ ಯತ್ನ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಮಲ್ ಪಾಷಾ, ಅಬೂಬಕರ್ ಸಿದ್ಧೀಕ್ ಹಾಗೂ ಸೈಯದ್ ಅನಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳು ಅಪ್ರಾಪ್ತರು ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಸ್ತೆ ತಡೆ ಆರೋಪ: ಮೂರನೇ ಎಫ್ಐಆರ್
ಘಟನೆಯ ನಂತರ ಸಾರ್ವಜನಿಕ ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೂರನೇ ಎಫ್ಐಆರ್ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್
ಘಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಬಸವನಗುಡಿ ಎನ್.ಆರ್. ರಸ್ತೆಯಲ್ಲಿ ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ಕೂಡ ನಿರಂತರ ಗಸ್ತು ನಡೆಸುತ್ತಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿವಿಧ ಆರೋಪಗಳು ಕೇಳಿಬಂದಿದ್ದು, ಪೊಲೀಸರು ದಾಖಲಿಸಿರುವ ಪ್ರಕರಣಗಳು ಮತ್ತು ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.



More Stories
ಹರಿಗೆ ಗ್ರಾಮದಲ್ಲಿ ಮದುವೆ ಬೃಹತ್ ಊಟಕ್ಕೆ ನಿಷೇಧ; 1 ಲಕ್ಷ ರೂ. ದಂಡ
ಯತ್ನಾಳ್ ವಿರುದ್ಧ ಎಫ್ಐಆರ್: ಬದುಕಿದ್ದವರಿಗೆ ಮರಣ ಪ್ರಮಾಣ ಪತ್ರ ಆರೋಪ
ವಿಜಯೇಂದ್ರ ಆರೋಪ: ಸ್ಟಿಂಗ್ ಆಪರೇಷನ್ ಕಾಂಗ್ರೆಸ್ನ ಚರಿತ್ರೆ