ಶಿವಮೊಗ್ಗ, ಸೆಪ್ಟೆಂಬರ್ 02: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರತಿಷ್ಠಿತ ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ (NSS) ಘಟಕಗಳು ಹಾಗೂ ಶಿವಮೊಗ್ಗದ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ (ರಿ.) ಅಭಿಯಾನದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಇಂದು ಕ್ಯಾನ್ಸರ್ ಕುರಿತು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರಮುಖ ರಸ್ತೆಗಳಾದ ಬಿ.ಎಚ್. ರಸ್ತೆ ಹಾಗೂ ಗಾಂಧಿ ಬಜಾರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರಳಿದ ವಿದ್ಯಾರ್ಥಿಗಳು ಸಾರ್ವಜನಿಕರನ್ನು ಭೇಟಿಯಾಗಿ, ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಿದರು.
ಉದ್ಯಮಿ ಎನ್. ಗೋಪಿನಾಥ್ ಚಾಲನೆ
ಈ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವ ಮುನ್ನ ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷ ಎನ್. ಗೋಪಿನಾಥ್ ಭಾಗವಹಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ಕ್ಯಾನ್ಸರ್ ಎನ್ನುವ ಕಾಯಿಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರಲ್ಲಿ ಇದನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬ ಭೀತಿಯಿದೆ. ಆದರೆ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಖಂಡಿತವಾಗಿಯೂ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಸಂಜೀವಿನಿ ಕ್ಯಾನ್ಸರ್ ಸಂಸ್ಥೆ ಮತ್ತು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸಮೀಕ್ಷೆ ನಡೆಸಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ” ಎಂದು ಬಣ್ಣಿಸಿದರು.
ಮುನ್ನೆಚ್ಚರಿಕೆ ಮತ್ತು ಸಾರ್ವಜನಿಕ ಸಹಕಾರ ಅಗತ್ಯ
ಶಿವಮೊಗ್ಗ ಬ್ರಾಹ್ಮಿನ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶರಾವ್ ಕೆ. ಮಾತನಾಡಿ, ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅಗತ್ಯವಿದೆ. ಮುಂಚಿತವಾಗಿ ಕಾಯಿಲೆಯ ಬಗ್ಗೆ ತಿಳಿದುಕೊಂಡರೆ ಭಯಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಮತ್ತು ಟ್ರಸ್ಟ್ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಸಿಗಲಿ ಎಂದು ಶುಭ ಹಾರೈಸಿದರು.
ಪರಿಸರವಾದಿ ಜನಾರ್ಧನ ಪೈ ಮಾತನಾಡಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಇತಿಹಾಸ ಉಪನ್ಯಾಸಕ ಎನ್. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳ ಸಾಮಾಜಿಕ ಸೇವೆಯ ಭಾಗವಾಗಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಪ್ರಮುಖರಾದ ಅ.ನಾ. ವಿಜಯೇಂದ್ರರಾವ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ವಾಗೀಶ್, ಶಿವಮೊಗ್ಗ ಬೈಕ್ ಕ್ಲಬ್ ನಿರ್ದೇಶಕ ಎನ್.ಎಸ್. ರವೀಂದ್ರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
A cancer awareness campaign was organized in Shivamogga by the NSS units of Sahyadri Arts College in collaboration with Sanjeevini Cancer Seva Trust. Rotary Club President N. Gopinath inaugurated the campaign near the Shivappa Nayaka statue. Students spread awareness among the public in B.H. Road and Gandhi Bazaar areas about early detection and prevention of cancer.



More Stories
ಪಿಎಂ ಇ-ಬಸ್ ಸೇವಾ ಯೋಜನೆಯಡಿ ಶೀಘ್ರವೇ ರಸ್ತೆಗಿಳಿಯಲಿವೆ 50 ಎಲೆಕ್ಟ್ರಿಕ್ ಬಸ್ಗಳು
ಸೆಪ್ಟೆಂಬರ್ 7 ರಿಂದ ಉಚಿತ ಯೋಗಾಸನ ಶಿಬಿರ | Shivamogga News
ಶಿವಮೊಗ್ಗದಲ್ಲಿ ‘ಶ್ರೀಮದ್ಭಾಗವತ’ ದಶಮ ಸ್ಕಂಧ ಪ್ರವಚನ ಕಾರ್ಯಕ್ರಮ