ಭಾರತವು ವಿಶ್ವಕ್ಕೆ ನೀಡಿದ ಅತ್ಯಂತ ಅಮೂಲ್ಯ ಕೊಡುಗೆಗಳಲ್ಲಿ ಸಂಸ್ಕೃತ ಭಾಷೆಯೂ ಒಂದು.
ಸಂಸ್ಕೃತವು ಕೇವಲ ಪ್ರಾಚೀನ ಭಾಷೆಯಲ್ಲ; ಅದು ಭವಿಷ್ಯದ ಜ್ಞಾನಭಾಷೆ. ಸಾವಿರಾರು ವರ್ಷಗಳ ಜ್ಞಾನ, ವಿಜ್ಞಾನ, ತತ್ವಶಾಸ್ತç ಸಾಹಿತ್ಯ, ವೈದ್ಯಶಾಸ್ತç ಮತ್ತು ಜೀವನಮೌಲ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಸಂಸ್ಕೃತ ಭಾಷೆಯ ಮಹತ್ವವನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕಾಗಿದೆ.
ಇಂದಿನ ಯುವಜನತೆ ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕಂಪ್ಯೂಟರ್, ಜಾಗತಿಕ ಉದ್ಯೋಗ ಮತ್ತು ಆಧುನಿಕ ಶಿಕ್ಷಣದತ್ತ ವೇಗವಾಗಿ ಸಾಗುತ್ತಿದೆ. ಇದು ಅವಶ್ಯಕವೂ ಹೌದು. ಆದರೆ ವೇಗವಾಗಿ ಮುಂದೆ ಸಾಗುವಾಗ ನಮ್ಮ ಬೇರುಗಳನ್ನು ಮರೆಯಬಾರದು. ಬೇರುಗಳಿಲ್ಲದ ಮರ ಹೆಚ್ಚು ಕಾಲ ನಿಲ್ಲಲಾರದು; ಸಂಸ್ಕೃತಿ ಮತ್ತು ಮೌಲ್ಯಗಳಿಲ್ಲದ ಪ್ರಗತಿಯೂ ಸಂಪೂರ್ಣವಾಗುವುದಿಲ್ಲ.
ಸAಸ್ಕೃತವು ನಮ್ಮ ಜ್ಞಾನಪರಂಪರೆಯ ಮಹಾಗಣಿಯಾಗಿದೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಪುರಾಣಗಳು, ಕಾವ್ಯಗಳು ಮಾತ್ರವಲ್ಲದೆ ಆಯುರ್ವೇದ, ಯೋಗ, ಗಣಿತ, ಖಗೋಳಶಾಸ್ತç, ವ್ಯಾಕರಣ, ತರ್ಕಶಾಸ್ತç ಸೇರಿದಂತೆ ಅನೇಕ ಜ್ಞಾನಶಾಖೆಗಳ ಅಮೂಲ್ಯ ಸಂಪತ್ತು ಸಂಸ್ಕೃತದಲ್ಲಿದೆ. ಯುವಕರು ಸಂಸ್ಕೃತ ಕಲಿತರೆ, ನಮ್ಮ ಪೂರ್ವಜರು ಬಿಟ್ಟುಹೋದ ಈ ಜ್ಞಾನನಿಧಿಯನ್ನು ಮೂಲ ರೂಪದಲ್ಲಿಯೇ ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ.
ಸಂಸ್ಕೃತ ಕಲಿಕೆಯು ಕೇವಲ ಭಾಷಾಜ್ಞಾನವನ್ನು ನೀಡುವುದಿಲ್ಲ; ಅದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಾಯಕವಾಗುತ್ತದೆ. ಸುಭಾಷಿತಗಳು ಜೀವನದ ಅನುಭವದಿಂದ ಬಂದ ಜ್ಞಾನವನ್ನು ನೀಡುತ್ತವೆ. ಶ್ಲೋಕಗಳು ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಬೆಳೆಸುತ್ತವೆ. ಭಗವದ್ಗೀತೆ ಕರ್ತವ್ಯನಿಷ್ಠೆಯನ್ನು ಕಲಿಸುತ್ತದೆ. ರಾಮಾಯಣ ಮತ್ತು ಮಹಾಭಾರತ ಜೀವನದ ಸಂಕಷ್ಟಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತವೆ. ಹೀಗಾಗಿ ಸಂಸ್ಕೃತ ಸಾಹಿತ್ಯವು ಯುವಜನತೆಗೆ ಜ್ಞಾನ, ಸಂಸ್ಕಾರ ಮತ್ತು ಜೀವನದೃಷ್ಟಿ ಎಂಬ ಮೂರು ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ.
ಯುವಕರು ಇಂಗ್ಲಿಷ್ ಕಲಿಯಬಾರದು ಎಂದಲ್ಲ; ವಿಜ್ಞಾನ-ತಂತ್ರಜ್ಞಾನವನ್ನು ತ್ಯಜಿಸಬೇಕು ಎಂದೂ ಅಲ್ಲ. ಇಂಗ್ಲಿಷ್, ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನ ಜಗತ್ತಿಗೆ ಅಗತ್ಯ. ಆದರೆ ಅದರೊಂದಿಗೆ ನಮ್ಮ ಭಾಷೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಯನ್ನು ಅರಿಯುವುದೂ ಅಷ್ಟೇ ಅಗತ್ಯ. ಇತರ ಭಾಷೆಗಳನ್ನು ಕಲಿಯುವುದು ಜಗತ್ತಿನೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ; ಸಂಸ್ಕೃತ ಕಲಿಯುವುದು ನಮ್ಮ ಬೇರುಗಳೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ.
ಸAಸ್ಕೃತವು ಕೇವಲ ಪಂಡಿತರು, ಅರ್ಚಕರು ಅಥವಾ ಸಂನ್ಯಾಸಿಗಳಿಗೆ ಮಾತ್ರ ಸೀಮಿತವಾದ ಭಾಷೆಯಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್‌ಗಳು, ವಕೀಲರು, ಉದ್ಯೋಗಿಗಳು ಮತ್ತು ಉದ್ಯಮಿಗಳು—ಎಲ್ಲರೂ ಸಂಸ್ಕೃತವನ್ನು ಕಲಿಯಬಹುದು. ಪ್ರತಿಯೊಬ್ಬ ಯುವಕ-ಯುವತಿಯೂ ಪ್ರತಿದಿನ ಒಂದೆರಡು ಸಂಸ್ಕೃತ ಪದಗಳನ್ನು ಕಲಿಯಲಿ, ಒಂದು ಸುಭಾಷಿತವನ್ನು ಕಂಠಪಾಠ ಮಾಡಲಿ, ಒಂದು ಶ್ಲೋಕದ ಅರ್ಥವನ್ನು ತಿಳಿದುಕೊಳ್ಳಲಿ, ಸಂಸ್ಕೃತದಲ್ಲಿ ಕೆಲವು ವಾಕ್ಯಗಳನ್ನು ಮಾತನಾಡಲು ಪ್ರಯತ್ನಿಸಲಿ. ಸಣ್ಣ ಹೆಜ್ಜೆಯೇ ಮುಂದೆ ದೊಡ್ಡ ಸಾಧನೆಯಾಗುತ್ತದೆ.
ಇಂದಿನ ಯುವಜನತೆ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ. ಅವರು ತಮ್ಮ ಸಂಸ್ಕೃತಿಯ ಶಕ್ತಿಯನ್ನು ಅರಿತರೆ, ಭಾರತದ ಜ್ಞಾನಪರಂಪರೆಗೆ ಹೊಸ ಜೀವ ಬರುತ್ತದೆ. ಸಂಸ್ಕೃತವನ್ನು ಕೇವಲ ಪಠ್ಯಪುಸ್ತಕದ ವಿಷಯವನ್ನಾಗಿ ನೋಡದೆ, ಜೀವನವನ್ನು ಉತ್ತಮಗೊಳಿಸುವ ಜ್ಞಾನಭಾಷೆಯಾಗಿ ಸ್ವೀಕರಿಸಬೇಕು.
ಇದಕ್ಕಾಗಿ ಸಂಸ್ಕೃತ ಉಳಿಸಿ ಬೆಳಸಲು ಕರ್ನಾಟಕದಿಂದ ಆರಂಭವಾದ ಸಂಸ್ಕೃತ ಭಾರತಿ ಇಂದು ದೇಶ ವಿದೇಶಗಳಲ್ಲಿ ಸಂಸ್ಕೃತವನ್ನು ಜನಪ್ರಿಯಗೊಳಿಸುತ್ತ ಸರಳವಾಗಿ ಸಂಸ್ಕೃತವನ್ನು ಕಲಿಸುವ ಹಲವಾರು ಯೋಜನೆಗಳನ್ನು ರೂಪಿಸಿದೆ. ಪತ್ರಾಲಯ, ಬಾಲಕೇಂದ್ರ, ಪ್ರಾಥಮಿಕ ಶಾಲೆಗಳು, ಸರಳ ಪರೀಕ್ಷೆ, ಗೀತಾ ಪರೀಕ್ಷೆ ಇತ್ಯಾದಿ ಯೋಜನೆಗಳ ಮೂಲಕ ಜನಸಾಮಾನ್ಯರನ್ನು ಸಂಸ್ಕೃತ ಕಲಿಕೆಯತ್ತ ಕೊಂಡೊಯುತ್ತಿದೆ. ಬೆಂಗಳೂರಿನ ಗಿರಿನಗರದಲ್ಲಿರುವ ಅಕ್ಷರಮ್, ಹುಬ್ಬಳಿಯಲ್ಲಿರುವ ಅಕ್ಷರಮ್, ಶಿವಮೊಗ್ಗದಲ್ಲಿರುವ ಸಂಸ್ಕೃತ ಭವನಮ್, ಇಂದು ಸಂಸ್ಕೃತ ಕಲಿಯುವವರಿಗೆ ಕೇಂದ್ರ ಬಿಂದುಗಳಾಗಿವೆ.
ಸಂಸ್ಕೃತ ದಿನದ ಸಂಕಲ್ಪ
ಈ ಸಂಸ್ಕೃತ ದಿನದಂದು ಪ್ರತಿಯೊಬ್ಬ ಯುವಕ-ಯುವತಿಯೂ ಒಂದು ಸಂಕಲ್ಪ ಮಾಡೋಣ:
“ನಾನು ಆಧುನಿಕ ಜ್ಞಾನವನ್ನು ಪಡೆಯುತ್ತೇನೆ; ಆದರೆ ನನ್ನ ಬೇರುಗಳನ್ನು ಮರೆಯುವುದಿಲ್ಲ. ಸಂಸ್ಕೃತ ಕಲಿಯುತ್ತೇನೆ; ಭಾರತೀಯ ಜ್ಞಾನಪರಂಪರೆಯನ್ನು ಅರಿಯುತ್ತೇನೆ; ನನ್ನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತೇನೆ.”
ಸಂಸ್ಕೃತ ಕಲಿಯೋಣ — ಜ್ಞಾನವನ್ನು ಪಡೆಯೋಣ!
ಸಂಸ್ಕೃತಿಯನ್ನು ಅರಿಯೋಣ — ಮೌಲ್ಯಗಳನ್ನು ಬೆಳೆಸೋಣ!
ಭಾರತದ ಜ್ಞಾನಪರಂಪರೆಯನ್ನು ಉಳಿಸಿ ಬೆಳೆಸೋಣ!
ಜಯತು ಸಂಸ್ಕೃತಮ್। ಜಯತು ಭಾರತಮ್।
ಅ.ನಾ.ವಿಜಯೇಂದ್ರ ರಾವ್,
ಸಂಸ್ಕೃತ ಭವನಮ್, ಶಿವಮೊಗ್ಗ



More Stories
ಗೌರಿ-ಗಣೇಶ ಹಬ್ಬಕ್ಕೆ ದಿನಸಿ ಬೆಲೆ ಏರಿಕೆ ಬಿಸಿ: ಈರುಳ್ಳಿ, ಸಕ್ಕರೆ, ಬೆಲ್ಲ ದುಬಾರಿ
ವಸಂತ ಪವಾರ್ ಸಾವು: ಅಪಘಾತವೇ? ಆಡಳಿತದ ವೈಫಲ್ಯವೇ?
ಹಾಸನದಲ್ಲಿ ಚಂದ್ರಪ್ರಭಾ ಜಿ.ಎಸ್. ಅವರ ‘ಜೀವಂತಿಕೆ ಪ್ರತಿಧ್ವನಿಸುವ’ ಚಿತ್ರಕಲೆಗಳ ಪ್ರದರ್ಶನ