ಶಿವಮೊಗ್ಗ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ: 7 ಸಾವಿರಕ್ಕೂ ಹೆಚ್ಚು ಭಕ್ತರ ಭಾಗವಹಿಸುವಿಕೆ
ಶಿವಮೊಗ್ಗ: ನಗರದ ಹೊರವಲಯದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಪ್ರಸಿದ್ಧ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು.
ನಾಗರ ಪಂಚಮಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅನಂತನ ಆರಾಧನೆ, ವಿಶೇಷ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಹಾಲಿಟ್ಟು ಸೇವೆ ಹಾಗೂ ವೇದ ಪಾರಾಯಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
2 ಸಾವಿರ ಲೀಟರ್ ಹಾಲು, 700 ಎಳನೀರಿನಿಂದ ಅಭಿಷೇಕ
ನಾಗಸುಬ್ರಹ್ಮಣ್ಯ ದೇವರಿಗೆ ವಿಶೇಷವಾಗಿ ಸುಮಾರು 2,000 ಲೀಟರ್ ಹಾಲು ಹಾಗೂ 700 ಎಳನೀರಿನಿಂದ ಅಭಿಷೇಕ ನೆರವೇರಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಗದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಆವರಣದಲ್ಲಿ ಪ್ರತಿನಿತ್ಯ ಭಜನೆ ಹಾಗೂ ಭಕ್ತಿಗೀತೆಗಳೊಂದಿಗೆ ಅನಂತನ ಆರಾಧನೆ ನೆರವೇರಿತು.
7 ಸಾವಿರಕ್ಕೂ ಹೆಚ್ಚು ಭಕ್ತರ ಭಾಗಿ
ಈ ಬಾರಿ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ 7,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ನಾಗಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾದರು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಭಕ್ತರಿಗಾಗಿ ವಿಶೇಷ ಪೂಜಾ ವ್ಯವಸ್ಥೆಯ ಜೊತೆಗೆ ಅನ್ನಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ನಾಗದೇವರ ಆರಾಧನೆಗೆ ವಿಶೇಷ ಮಹತ್ವ
ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಮಾತನಾಡಿ, ನಾಗದೇವರ ದರ್ಶನ ಮತ್ತು ಪೂಜೆಗೆ ಧಾರ್ಮಿಕವಾಗಿ ವಿಶೇಷ ಮಹತ್ವವಿದೆ ಎಂದು ತಿಳಿಸಿದರು.
ನಾಗದೇವರ ಆರಾಧನೆಯಿಂದ ಭಕ್ತರ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ನಾಗದೇವರಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಪ್ರತಿ ವರ್ಷ ದೇವಸ್ಥಾನದಲ್ಲಿ ಸಮಿತಿಯ ಸಹಕಾರದೊಂದಿಗೆ ಭಕ್ತರಿಗಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಗಣ್ಯರು, ದೇವಸ್ಥಾನ ಸಮಿತಿ ಸದಸ್ಯರು ಭಾಗಿ
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ, ಗೌರವ ನಿರ್ದೇಶಕರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ವಸಂತ ಭಟ್, ಪ್ರಸನ್ನ ಭಟ್, ಗಣೇಶ್ ಭಟ್, ಚೇತನ್ ಭಟ್ ಹಾಗೂ ಪ್ರಬಂಧ ಭಟ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.
ನಾಗರ ಪಂಚಮಿ ಅಂಗವಾಗಿ ನಡೆದ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.



More Stories
ಸ್ವಾಮಿ ವಿವೇಕಾನಂದ ಬಡಾವಣೆ, ಡಿವಿಎಸ್ ಕಾಲೋನಿಗೆ ಶಾಸಕ ಚೆನ್ನಿ ಭೇಟಿ; ರಸ್ತೆ, ಯುಜಿಡಿ, ಪಾರ್ಕ್ ಸ್ವಚ್ಛತೆಗೆ ಅಧಿಕಾರಿಗಳಿಗೆ ತಾಕೀತು
ಮಲೆನಾಡಿನ ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬಿದ ‘ಕೆಸರಲ್ಲಿ ಒಂದು ದಿನ’ ಕಾರ್ಯಕ್ರಮ