AI-Vartha.in

ನಿಖರ ಸುದ್ದಿ, ನೇರ ವರದಿ

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಮೂರನೇ ಅಖಿಲ ಕರ್ನಾಟಕ ಗಜಲ್ ಸಮ್ಮೇಳನ

ಶಿವಮೊಗ್ಗ: ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು (ರಿ.) ವತಿಯಿಂದ ರಾಜ್ಯಮಟ್ಟದ ಮೂರನೇ ಅಖಿಲ ಕರ್ನಾಟಕ ಗಜಲ್ ಸಮ್ಮೇಳನ ಹಾಗೂ ಮಿರ್ಜಾ ಗಾಲಿಬ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 23ರಂದು ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಹಾಗೂ ಸಮ್ಮೇಳನದ ಸಂಚಾಲಕಿ ಡಾ. ಹಸೀನಾ ಎಚ್. ಖಾದ್ರಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಹೆಬ್ಬಾಗಿಲು ಹಾಗೂ ಸಾಂಸ್ಕೃತಿಕ ನಗರಿ ಶಿವಮೊಗ್ಗದಲ್ಲಿ ಗಜಲ್ ವಾತಾವರಣವನ್ನು ಬೆಳೆಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.

ಜಂಬಣ್ಣ ಅಮರಚಿಂತ ವೇದಿಕೆಯಲ್ಲಿ ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಿದ್ದರಾಮಯ್ಯ ಹಿರೇಮಠ ಕೊಡ್ಲಿಗಿ ವಹಿಸಲಿದ್ದು, ಹಿರಿಯ ಸಾಹಿತಿ ಸವಿತಾ ನಾಗಭೂಷಣ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ರತ್ನ ಕೆ. ಭಟ್ ಅವರಿಗೆ ಮಿರ್ಜಾ ಗಾಲಿಬ್ ಗಜಲ್ ಪ್ರಶಸ್ತಿ

ಕರ್ನಾಟಕ ಗಜಲ್ ಅಕಾಡೆಮಿ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಿರ್ಜಾ ಗಾಲಿಬ್ ಗಜಲ್ ಪ್ರಶಸ್ತಿ ನೀಡಲಾಗುತ್ತಿದ್ದು, ತಲಚೇರಿ ಮೂಲದ ರತ್ನ ಕೆ. ಭಟ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪದವೀಧರರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಮೊಹಮ್ಮದ್ ಅನ್ಸರ್ ಸಾಬ್ ಖಾದ್ರಿ ಭಾಗವಹಿಸಲಿದ್ದಾರೆ.

ಡಾ. ಸಿದ್ದರಾಮ ಹೊನ್ಕಲ್ ಅವರು ‘ಗಜಲ್ ಯಾನ’ ಅಕಾಡೆಮಿಯ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಡಾ. ಕಾಶೀನಾಥ ಅಂಬಲಗೆ, ಕಾರ್ಯದರ್ಶಿ ಮಹಿಪಾಲ್ ರೆಡ್ಡಿ ಮುಂತಾದವರು ಉಪಸ್ಥಿತರಿರಲಿದ್ದಾರೆ.

2025-26ನೇ ಸಾಲಿನಲ್ಲಿ ಪ್ರಕಟಗೊಂಡ ಗಜಲ್ ಕೃತಿಗಳನ್ನು ಹಿರಿಯ ಗಜಲ್‌ಕಾರರಾದ ಅಬ್ದುಲ್ ಹೈ ತೋರಣಗಲ್ಲು, ಸಿಕಂದರ್ ಅಲಿ ತೋರಣಗಲ್ಲು ಹಾಗೂ ನೀಲಮ್ಮ ಬಿ. ಮಲ್ಲೆ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ದಿನಪೂರ್ತಿ ಗಜಲ್ ಕಾರ್ಯಕ್ರಮ

ಮಲೆನಾಡಿನ ಖ್ಯಾತ ಗಜಲ್ ಗಾಯಕ ಇಮ್ತಿಯಾಜ್ ಸುಲ್ತಾನ್ ಕೊಣಂದೂರು ಅವರಿಂದ ಗಜಲ್ ಗಾಯನ ನಡೆಯಲಿದೆ. ದಿನಪೂರ್ತಿ ಎರಡು ಗಜಲ್ ಗೋಷ್ಠಿಗಳು, ಗಜಲ್ ಗಾಯನ ಹಾಗೂ ಸಮಾರೋಪ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಸ್ಥಳೀಯ ಸಂಚಾಲಕರಾಗಿ ಪ್ರೊ. ಡಾ. ಮಂಜುನಾಥ್ ಕೆ.ಎನ್., ಚೆನ್ನಬಸಪ್ಪ ನ್ಯಾಮತಿ, ಹಸನ್ ಬೆಳಿಗನೂಡು, ಪುನೀತ್ ಜವಳಿ, ವಾಗೀಶ್ ಆರಾಧ್ಯಮಠ ಹಾಗೂ ಇಸ್ಮಾಯಿಲ್ ಅವರು ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು ಗಜಲ್‌ಕಾರರು, ಸಾಹಿತ್ಯಾಸಕ್ತರು ಹಾಗೂ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

The third state-level Akhila Karnataka Ghazal Sammelana will be held in Shivamogga on August 23, featuring the Mirza Ghalib Ghazal Award, literary sessions, ghazal recitals and participation from over 200 poets and literature enthusiasts.