ಮೂರು ತಿಂಗಳ ಕಾಲ ಯಾವುದೇ ರೇಷನ್ ಕಾರ್ಡ್ ರದ್ದು ಮಾಡದಂತೆ ಸೂಚನೆ ನೀಡಲಾಗಿದ್ದು, ಮಾನದಂಡಗಳಲ್ಲಿ ಪರಿಷ್ಕರಣೆ ತಂದು ಅರ್ಹರಿಗೆ ನ್ಯಾಯ ಒದಗಿಸಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ, ಸೆಪ್ಟೆಂಬರ್ 01: ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಬಿಪಿಎಲ್ (BPL) ಅಥವಾ ಎಪಿಎಲ್ (APL) ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸುವುದಿಲ್ಲ ಎಂದು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ. ಏಕಾಏಕಿ ಕಾರ್ಡ್‌ಗಳನ್ನು ಡಿಲೀಟ್ ಮಾಡುವುದರಿಂದ ಬಡವರಿಗೆ ಅನ್ಯಾಯವಾಗಲಿದ್ದು, ಮುಂದಿನ ಮೂರು ತಿಂಗಳ ಕಾಲ ಯಾವುದೇ ಕಾರ್ಡ್ ರದ್ದು ಮಾಡದಂತೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬಿಪಿಎಲ್ ಪಟ್ಟಿಯಲ್ಲಿ ಅನರ್ಹರು ಸೇರಿಕೊಂಡಿರುವುದು ಗೊತ್ತಿದೆ. ಆದರೆ ಇಂದಿನ ಆರ್ಥಿಕ ವ್ಯವಸ್ಥೆಗೆ ಹಳೆಯ ಬಿಪಿಎಲ್ ಮಾನದಂಡಗಳು ಸೂಕ್ತವಾಗಿಲ್ಲ. ಹೀಗಾಗಿ ಈ ಮಾನದಂಡಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿಗೂ ಅನೇಕ ಅರ್ಹ ಬಡ ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ಹೊರಗುಳಿದಿದ್ದು, ಅವರನ್ನು ಪಟ್ಟಿಗೆ ಸೇರಿಸುವ ಕಾರ್ಯವಾಗಬೇಕಿದೆ. ಮೂರು ತಿಂಗಳ ನಂತರ ಈ ಕುರಿತು ಒಂದು ಸ್ಪಷ್ಟ ರೂಪ ನೀಡಲಾಗುವುದು ಎಂದು ಅವರು ಹೇಳಿದರು.
ಸಚಿವ ರಾಯರೆಡ್ಡಿ ಹೇಳಿಕೆಗೆ ಬೆಂಬಲ
ಇದೇ ವೇಳೆ ಸಚಿವ ರಾಯರೆಡ್ಡಿ ಅವರ ಇತ್ತೀಚಿನ ಹೇಳಿಕೆಯನ್ನು ಸಮರ್ಥಿಸಿಕೊಂಡ ರಿಜ್ವಾನ್ ಅರ್ಷದ್, ರಾಯರೆಡ್ಡಿ ಅವರು ಧಾರ್ಮಿಕ ಸಾಮರಸ್ಯದ ಉದ್ದೇಶದಿಂದ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ರಾಯರೆಡ್ಡಿ ಅವರು ಯಾವುದೇ ಧರ್ಮವನ್ನು ಕೀಳಾಗಿ ಕಂಡಿಲ್ಲ ಅಥವಾ ಟೀಕಿಸಿಲ್ಲ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸೌಹಾರ್ದತೆ ಮೂಡಿಸಲು ಮುಸ್ಲಿಂ ಧರ್ಮದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಸಚಿವರು ಪ್ರತಿಪಾದಿಸಿದರು.
ಬೆಟ್ಟಕ್ಕೆ ಹೋಗುವುದು ತಪ್ಪಾ ಎಂದು ಪ್ರಶ್ನೆ
ಒಬ್ಬರನ್ನು ಒಳ್ಳೆಯವರೆಂದು ಹೇಳಿದ ತಕ್ಷಣ ಇತರರನ್ನು ಕೆಟ್ಟವರೆಂದು ಭಾವಿಸುವ ಅಗತ್ಯವಿಲ್ಲ ಎಂದ ಸಚಿವರು, “ನಾಳೆ ನಾನು ಸಹ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ಅದು ತಪ್ಪಾಗುತ್ತದೆಯೇ?” ಎಂದು ಪ್ರಶ್ನಿಸಿದರು. ರಾಯರೆಡ್ಡಿ ಅವರು ಮುಸ್ಲಿಂ ಧರ್ಮ ಮಾತ್ರ ಶ್ರೇಷ್ಠ ಎಂದು ಎಲ್ಲಿಯೂ ಹೇಳಿಲ್ಲ. ಮುಸ್ಲಿಂ ಸಮುದಾಯದವರನ್ನು ಪ್ರೀತಿಯಿಂದ ಕಾಣಲು ಎರಡು ಮಾತುಗಳನ್ನಾಡಿದ್ದಾರೆ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ಅವರಿಗೆ ಯಾವಾಗಲೂ ಹಿಂದೂ-ಮುಸ್ಲಿಂ ಅಜೆಂಡಾವೇ ಪ್ರಮುಖ ರಾಜಕೀಯ ವಿಷಯವಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ವಾಗ್ದಾಳಿ ನಡೆಸಿದರು.
Minister Rizwan Arshad announced that BPL and APL ration cards in Karnataka will not be cancelled for the next three months. He emphasized that criteria for BPL cards need revision so that eligible poor families are included. Additionally, he defended Minister Rayareddy’s statements as an attempt to foster communal harmony and criticized the BJP for politicizing the issue.



More Stories
ಶಿವಮೊಗ್ಗ ರೋಟರಿ ಕ್ಲಬ್ ಉತ್ತರ ಘಟಕದ ಸಮಾಜಮುಖಿ ಸೇವೆಗೆ ಸಂದ ಗೌರವ: ಭರಪೂರ 33 ಜಿಲ್ಲಾ ಪ್ರಶಸ್ತಿ ಪ್ರಧಾನ
‘ಗೃಹಜ್ಯೋತಿ’ ಸಮೀಕ್ಷೆ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ
ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ಅಭಿಯಾನ: ಅರ್ಹರಿಗೆ ಸೌಲಭ್ಯ ಮುಂದುವರಿಕೆ