ಮನೆ-ಮನೆಗೆ ಭೇಟಿ ನೀಡಿ ಬಯೋಮೆಟ್ರಿಕ್, ಮುಖ ಚಹರೆ ದೃಢೀಕರಣ; ಅನರ್ಹರನ್ನು ಕೈಬಿಡಲು ಕ್ರಮ
ಶಿವಮೊಗ್ಗ, ಆಗಸ್ಟ್ 31: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನಾ ಅಭಿಯಾನ ಆರಂಭವಾಗಲಿದೆ. ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಮಾತ್ರ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಹಾಗೂ ಮುಖ ಚಹರೆ ದೃಢೀಕರಣ (ಫೇಶಸ್ ಅಥೆಂಟಿಕೇಷನ್) ಮೂಲಕ ಮರುಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಫಲಾನುಭವಿಗಳು ಮೃತಪಟ್ಟಿರುವುದು, ವಲಸೆ ಹೋಗಿರುವುದು ಹಾಗೂ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸಿರುವ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕೈಬಿಡುವುದರ ಜೊತೆಗೆ, ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಗೃಹಲಕ್ಷ್ಮಿ ಸೌಲಭ್ಯ ಮುಂದುವರಿಸಲು ಮರುಪರಿಶೀಲನಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆ-ಮನೆಗೆ ಭೇಟಿ ನೀಡಲಿರುವ ತಂಡಗಳು
ಫಲಾನುಭವಿಗಳ ಮರುಪರಿಶೀಲನಾ ಪ್ರಕ್ರಿಯೆಯನ್ನು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವಿಸಸ್ (EDCS) ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ವೆಬ್/ಮೊಬೈಲ್ ಆಪ್ ಮೂಲಕ ನಡೆಸಲಾಗುತ್ತದೆ.
ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸರ್ಕಾರಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಫಲಾನುಭವಿಗಳು ನಮೂನೆಯನ್ನು ಭರ್ತಿ ಮಾಡಿ, ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿಯೇ ಹಿಂತಿರುಗಿಸಬೇಕು.
ಈ ಸಂದರ್ಭದಲ್ಲಿ ಸಿಬ್ಬಂದಿ ಫಲಾನುಭವಿಯ ಫೋಟೋ, ಜಿಪಿಎಸ್ ನಿರ್ದೇಶಾಂಕಗಳು, ಮುಖ ಚಹರೆ ದೃಢೀಕರಣ ಹಾಗೂ ಮತದಾರರ ಗುರುತಿನ ಚೀಟಿ (EPIC) ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಕೊಳ್ಳಲಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ.
ಮುಖ ದೃಢೀಕರಣ ವಿಫಲವಾದರೆ ಪರ್ಯಾಯ ವ್ಯವಸ್ಥೆ
ಮನೆ ಭೇಟಿಯ ಸಂದರ್ಭದಲ್ಲಿ ಮುಖ ಚಹರೆ ದೃಢೀಕರಣ ವಿಫಲವಾದರೆ ಅಥವಾ ತಾಂತ್ರಿಕ ಕಾರಣದಿಂದ ಸಾಧ್ಯವಾಗದಿದ್ದರೆ, ಫಲಾನುಭವಿಗಳು ಹತ್ತಿರದ ನ್ಯಾಯಬೆಲೆ ಅಂಗಡಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬಹುದಾಗಿದೆ.
ಇದರ ಜೊತೆಗೆ, ಜುಲೈ 1ರ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ಸಂದರ್ಭದಲ್ಲಿ ದಾಖಲಾದ ಬಯೋಮೆಟ್ರಿಕ್ ದತ್ತಾಂಶವನ್ನು ಆಹಾರ ಇಲಾಖೆಯಿಂದ ಪಡೆದು ಪರಿಶೀಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ₹2,391 ಕೋಟಿಗೂ ಅಧಿಕ ಹಣ
ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷಗಳು ಪೂರ್ಣಗೊಂಡಿದ್ದು, ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಲಾಗಿದೆ ಎಂದು ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 2023ರ ಆಗಸ್ಟ್ 30ರಿಂದ ಇಲ್ಲಿಯವರೆಗೆ 32 ಕಂತುಗಳಲ್ಲಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ತಲಾ ಫಲಾನುಭವಿಗೆ ಒಟ್ಟು ₹64,000ರಂತೆ ಹಣ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ₹2,391 ಕೋಟಿಗೂ ಅಧಿಕ ಮೊತ್ತವನ್ನು ಡಿಬಿಟಿ (DBT) ಮೂಲಕ ಜಮೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿರಂತರವಾಗಿ ದೊರೆಯುವಂತೆ ಮಾಡುವುದೇ ಮರುಪರಿಶೀಲನಾ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
The Karnataka government has ordered re-verification of Gruha Lakshmi beneficiaries through biometric and facial authentication to ensure benefits continue only for eligible beneficiaries.



More Stories
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಸದ್ಯಕ್ಕಿಲ್ಲ: ಬಿಪಿಎಲ್ ಕಾರ್ಡ್ದಾರರಿಗೆ ಸಚಿವ ರಿಜ್ವಾನ್ ಅರ್ಷದ್ ಬಿಗ್ ರಿಲೀಫ್
ಶಿವಮೊಗ್ಗದ ಗ್ಯಾರೇಜ್ ಮೇಲೆ ದಾಳಿ: ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ, ಮಾಲೀಕರಿಗೆ ಐವತ್ತು ಸಾವಿರ ದಂಡದ ಎಚ್ಚರಿಕೆ
ಹಣಗೆರೆಕಟ್ಟೆ ಭಾವೈಕ್ಯತಾ ಕೇಂದ್ರ: ಕಾಣಿಕೆ ಹುಂಡಿಯಲ್ಲಿ ₹54.50 ಲಕ್ಷಕ್ಕೂ ಅಧಿಕ ಹಣ ಸಂಗ್ರಹ; ಧಾರ್ಮಿಕ ಸೌಹಾರ್ದತೆಗೆ ಹೆಸರುವಾಸಿಯಾದ ಮುಜರಾಯಿ ಇಲಾಖೆಯ ‘ಎ’ ಶ್ರೇಣಿಯ ಕ್ಷೇತ್ರ