ಹೊಳಲೂರು ಗ್ರಾಮದ ಗೋದಾಮಿನಿಂದ ಕೋಟ್ಯಂತರ ಮೌಲ್ಯದ ಅಡಿಕೆ ಕಳವು ಮಾಡಿದ್ದ ಐವರು ಆರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಹಾಗೂ ಕಳುವಾದ ಅಡಕೆಯನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ, ಸೆ.03: ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 4 ಕ್ವಿಂಟಾಲ್ 80 ಕೆಜಿ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ವಾಹನಗಳು ಹಾಗೂ ಅಡಿಕೆ ಸೇರಿದಂತೆ ಒಟ್ಟು ₹5.75 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.
ಆಗಸ್ಟ್ 23ರಂದು ಬೆಳಗಿನ ಜಾವ ಹೊಳಲೂರು ಗ್ರಾಮದ ಗೋದಾಮಿಗೆ ಅಕ್ರಮವಾಗಿ ನುಗ್ಗಿದ್ದ ಕಳ್ಳರು, ಸುಮಾರು ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಒಣ ಅಡಿಕೆಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡದಿಂದ ಚುರುಕಿನ ಕಾರ್ಯಾಚರಣೆ: ಪ್ರಕರಣದ ತೀವ್ರತೆಯನ್ನು ಪರಿಗಣಿಸಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಬಿ-ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ಹಾಗೂ ಸಬ್ ಇನ್ಸ್‌ಪೆಕ್ಟರ್ ನವೀನ್ ಮಠಪತಿ ನೇತೃತ್ವದ ತಂಡವು ತನಿಖೆ ನಡೆಸಿ, ಸೆಪ್ಟೆಂಬರ್ 2ರಂದು ಮಧ್ಯಾಹ್ನ 3.30ರ ಸುಮಾರಿಗೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳು ಮತ್ತು ಜಪ್ತಿಯಾದ ಸ್ವತ್ತುಗಳು: ಬಂಧಿತರನ್ನು ರಾಹುಲ್ (25), ಜಗನ್ನಾಥ್ ಎಸ್. (23), ಚಂದನ್ ಕೆ. (22), ನವೀನ್ ಅಲಿಯಾಸ್ ಟಿಪ್ಪಿ (20) ಹಾಗೂ ಸುದೀಪ್ ಡಿ. ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಮಾರುತಿ ಸುಜುಕಿ ಇಕೋ ಕಾರು, ₹25 ಸಾವಿರ ಮೌಲ್ಯದ ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕ್ ಹಾಗೂ ಕಳ್ಳತನ ಮಾಡಲಾಗಿದ್ದ 4 ಕ್ವಿಂಟಾಲ್ 60 ಕೆಜಿ ಒಣ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹5.75 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ಅಮಾನತುಪಡಿಸಿಕೊಂಡಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.



More Stories
ರಾಮನಗರದಲ್ಲಿ ತಯಾರಾಗುತ್ತಿದ್ದ ಖೋಟಾ ನೋಟು ಜಾಲ ಬಯಲು: ಸಿಕ್ಕಿಬಿದ್ದ ಆರೋಪಿಗಳಿಂದ ಸೀಕ್ರೆಟ್ ರಿವೀಲ್!
ದಿಶಾ ಸಾಲ್ಯಾನ್ ಸಾವು ಪ್ರಕರಣ: ಎಫ್ಐಆರ್ ದಾಖಲಿಸಿ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ
ಮಾಜಿ ಉಪ ತಹಶೀಲ್ದಾರ್ಗೆ 4 ವರ್ಷ ಜೈಲು, ₹40 ಸಾವಿರ ದಂಡ