ರಾಮನಗರ ನಗರದ ಶಾಂತಿಲಾಲ್ ಲೇಔಟ್‌ನಲ್ಲಿ ನಡೆಯುತ್ತಿದ್ದ ನಕಲಿ ನೋಟು ತಯಾರಿಕಾ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಹಿಂದಿರುವ ಶಂಕಾಸ್ಪದ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರಾಮನಗರ: ನಗರದ ಶಾಂತಿಲಾಲ್ ಲೇಔಟ್‌ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಖೋಟಾ ನೋಟು ತಯಾರಿಕಾ ಜಾಲದ ಮೇಲೆ ರಾಮನಗರ ಪೊಲೀಸರು ಭರ್ಜರಿ ದಾಳಿ ನಡೆಸಿ, ಜಾಲದ ಸೂತ್ರಧಾರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಾಮನಗರ ನಗರ ವೃತ್ತ ಆರಕ್ಷಕ ನಿರೀಕ್ಷಕ (ಸಿಪಿಐ) ರಮೇಶ್ ಅವರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಸ್ಥಳದಲ್ಲಿದ್ದ ಆರೋಪಿಗಳು ₹200 ಮತ್ತು ₹500 ಮುಖಬೆಲೆಯ ನಕಲಿ ನೋಟುಗಳಿಗೆ ಪೇಪರ್ ತಯಾರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳ ವಿವರ: ಮನೆ ಮಾಲೀಕ ಸಂತೋಷ್, ಜಾಲದ ಪ್ರಮುಖ ಸೂತ್ರಧಾರ ಸಂಪತ್, ಗೋವಿಂದರಾಜು, ರೇಣುಕಾರಾಜ್, ರಾಜೇಶ್, ಶಿವರಾಜ್ ಹಾಗೂ ಸತೀಶ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಹಲವರು ಸ್ಥಳೀಯರೇ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕಮಿಷನ್ ಆಸೆಗೆ ಬಿದ್ದು ಮನೆ ಕೊಟ್ಟಿದ್ದ ಮಾಲೀಕ: ಮನೆ ಮಾಲೀಕ ಸಂತೋಷ್ ಮೂಲತಃ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದವನಾಗಿದ್ದು, ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಶಾಂತಿಲಾಲ್ ಲೇಔಟ್‌ನಲ್ಲಿ ಈತ ಮನೆ ಕಟ್ಟಿಸುತ್ತಿದ್ದಾಗ ಸಂಪರ್ಕಕ್ಕೆ ಬಂದ ಆರೋಪಿ ಸಂಪತ್, ತಯಾರಾಗುವ ಪ್ರತೀ ಖೋಟಾ ನೋಟಿಗೆ ಹೆಚ್ಚಿನ ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿದ್ದ. ಹಣದ ದುರಾಸೆಗೆ ಬಿದ್ದ ಸಂತೋಷ್, ಕಳೆದ 10 ದಿನಗಳಿಂದ ತನ್ನ ನಿರ್ಮಾಣ ಹಂತದ ಮನೆಯನ್ನೇ ನಕಲಿ ನೋಟುಗಳ ಅಡ್ಡೆಯನ್ನಾಗಿ ಮಾಡಲು ಬಿಟ್ಟುಕೊಟ್ಟಿದ್ದಲ್ಲದೆ, ಕೃತ್ಯದಲ್ಲೂ ಭಾಗಿಯಾಗಿದ್ದ.
ಈ ನಕಲಿ ನೋಟುಗಳನ್ನು ಮನೆ ನಿರ್ಮಾಣಕ್ಕಾಗಿ ಸಾಮಗ್ರಿಗಳನ್ನು ಖರೀದಿಸಲು ಹಾಗೂ ಕಾರ್ಮಿಕರಿಗೆ ಕೂಲಿ ನೀಡಲು ಬಳಸಲು ಯೋಜನೆ ರೂಪಿಸಲಾಗಿತ್ತು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ತಿಳಿದುಬಂದಿದೆ.
ಇಲ್ಲಿ ಪೇಪರ್ ರೆಡಿ, ಫಿನಿಶಿಂಗ್ ಬೇರೆ ಕಡೆ! ಪೊಲೀಸರು ದಾಳಿ ನಡೆಸಿದ ವೇಳೆ ಸುಮಾರು ₹5 ಲಕ್ಷ ಮೌಲ್ಯದ ನಕಲಿ ನೋಟು ತಯಾರಿಕೆಗೆ ಬಳಸುವ ವಿಶೇಷ ಪೇಪರ್‌ಗಳನ್ನು ಆರೋಪಿಗಳು ಸಿದ್ಧಪಡಿಸುತ್ತಿದ್ದರು. ಇಲ್ಲಿ ಕೇವಲ ಕಚ್ಚಾ ಪೇಪರ್‌ಗಳನ್ನು ಸಿದ್ಧಪಡಿಸಿ, ನಂತರ ಅದನ್ನು ಬೇರೆಡೆಗೆ ರವಾನಿಸಿ ಅಂತಿಮ ಮುದ್ರಣ (ಫಿನಿಶಿಂಗ್) ನೀಡುವ ವ್ಯವಸ್ಥೆ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಥಳದಲ್ಲಿದ್ದ ಟೇಬಲ್, ಪೇಪರ್ ಬಂಡಲ್‌ಗಳು, ಕೆಮಿಕಲ್, ರಾಸಾಯನಿಕ ಲೇಪಿತ ಬಟ್ಟೆ, ಗ್ಲಾಸ್ ಫಿಲ್ಮ್ ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ತನಿಖೆಗೆ ವಿಶೇಷ ತಂಡ ರಚನೆ: ಎಸ್ಪಿ ರೋಹನ್ ಜಗದೀಶ್ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಎಸ್ಪಿ ರೋಹನ್ ಜಗದೀಶ್, “ಈ ಜಾಲದ ಹಿಂದೆ ಇನ್ನಷ್ಟು ಅಂತಾರಾಜ್ಯ ಕಿಂಗ್‌ಪಿನ್‌ಗಳು ಇರುವ ಶಂಕೆ ಇದೆ. ಇಲ್ಲಿ ತಯಾರಾದ ಪೇಪರ್‌ಗಳನ್ನು ಎಲ್ಲಿಗೆ ಕಳುಹಿಸಲಾಗುತ್ತಿತ್ತು? ನಕಲಿ ನೋಟುಗಳಿಗೆ ಅಂತಿಮ ರೂಪ ನೀಡುತ್ತಿದ್ದವರು ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದ ಆಳ-ಅಗಲ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಈ ಸಂಬಂಧ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.



More Stories
ಹೊಳಲೂರಿನಲ್ಲಿ 4.80 ಕ್ವಿಂಟಾಲ್ ಒಣ ಅಡಿಕೆ ಕಳ್ಳತನ: ಐವರು ಆರೋಪಿಗಳನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು
ದಿಶಾ ಸಾಲ್ಯಾನ್ ಸಾವು ಪ್ರಕರಣ: ಎಫ್ಐಆರ್ ದಾಖಲಿಸಿ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ
ಮಾಜಿ ಉಪ ತಹಶೀಲ್ದಾರ್ಗೆ 4 ವರ್ಷ ಜೈಲು, ₹40 ಸಾವಿರ ದಂಡ