ಅತಿಯಾದ ತಾಂತ್ರಿಕತೆಯ ಬಳಕೆಯಿಂದ ಮಕ್ಕಳ ಶಿಕ್ಷಣದಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ ಎಂದು ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಚಾರ್ಯ ಶ್ರೀಕಾಂತ್ ಎಂ. ಹೆಗಡೆ ಕಳವಳ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ, ಸೆ.05: ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಚಾರ್ಯ ಶ್ರೀಕಾಂತ್ ಎಂ. ಹೆಗಡೆ, ಇಂದಿನ ಅತಿಯಾದ ತಾಂತ್ರಿಕತೆಯ ಬಳಕೆಯಿಂದ ಮಕ್ಕಳ ಶಿಕ್ಷಣದಲ್ಲಿ ಏಕಾಗ್ರತೆಯ ಕೊರತೆಯುಂಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮಟ್ಟವನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿಯ ಅರಿವು ಮೂಡಿಸಲು ಶಾಲೆಯಲ್ಲಿ ಒಂದು ದಿನದ ಮಟ್ಟಿಗೆ ವಿದ್ಯಾರ್ಥಿಗಳನ್ನೇ ಶಿಕ್ಷಕರನ್ನಾಗಿ ಮಾಡಿ ತರಗತಿಯ ನಿರ್ವಹಣೆಯನ್ನು ಮಾಡಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ: ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಪ್ರತಿ ವರ್ಷ ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶ್ರದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಂಸ್ಥೆಯ ಏಳಿಗೆಗೆ ಇಲ್ಲಿನ ಶಿಕ್ಷಕರ ಶ್ರಮವೇ ಪ್ರಮುಖ ಕಾರಣ. ಮಕ್ಕಳಲ್ಲಿ ಮೌಲ್ಯವರ್ಧನೆ ಮಾಡುವುದು ಗುರುಗಳ ಕರ್ತವ್ಯ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮಹತ್ತರ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಶಾಲೆಯ ಹಿರಿಯ ಉಪ ಪ್ರಾಂಶುಪಾಲ ಡಾ. ರೆಜಿ ಜೋಸೆಫ್ ಹಾಗೂ ಉಪ ಪ್ರಾಂಶುಪಾಲರಾದ ವಾಣಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ನೃತ್ಯ ಹಾಗೂ ನಾಟಕ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ವಿದ್ಯಾರ್ಥಿಗಳಾದ ಕುಮಾರಿ ಧೃತಿರಾಮ್ ಹಾಗೂ ಕುಮಾರಿ ಆರುಶಿ ಗೌಡ ಕಾರ್ಯಕ್ರಮ ನಿರೂಪಿಸಿದರು. ಕುಮಾರ್ ಕಾರ್ತಿಕ್ ಸ್ವಾಗತಿಸಿ, ಕುಮಾರ್ ರಿಷಿಕೇಶ್ ಭಟ್ ವಂದಿಸಿದರು.
Teachers’ Day was celebrated at Jnanadeepa Senior Secondary School in Javalli. School Principal Srikanth M. Hegde raised concerns over technology reducing students’ concentration in studies. Institution President Talavane Prakash highlighted the crucial role of teachers in shaping responsible citizens for the country.



More Stories
ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ವರ್ಗಾವಣೆ: ತುಂಗನಗರಕ್ಕೆ ಮಂಜುನಾಥ್, ಲೋಕಾಯುಕ್ತಕ್ಕೆ ಗುರುರಾಜ್!
ಶಿವಮೊಗ್ಗ: ಓಲಾ ಎಲೆಕ್ಟ್ರಿಕ್ ವಾಹನಗಳ ಸರ್ವಿಸ್ಗೆ ಪರದಾಟ; “ಇಂದು ಬನ್ನಿ, ನಾಳೆ ಬನ್ನಿ” ಎಂದು ಅಲೆದಾಡಿಸುತ್ತಿರುವ ಶೋರೂಮ್ ಸಿಬ್ಬಂದಿ!
ವಿದ್ಯಾರ್ಥಿ ಹೋರಾಟದ ಕಣದಿಂದ ‘ಸ್ಬೂಡಾ’ ಅಧ್ಯಕ್ಷ ಸ್ಥಾನದವರೆಗೆ: ಸಿ.ಜಿ. ಮಧುಸೂದನ್ ರಾಜಕೀಯ ಪಯಣದ ಸಂಪೂರ್ಣ ನೋಟ