ಶಿವಮೊಗ್ಗ, ಸೆ.05: ಸಹ್ಯಾದ್ರಿ ವಿಜ್ಞಾನ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಜಂಟಿ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಶಿಕ್ಷಕರ ದಿನಾಚರಣೆ’ ಹಾಗೂ ವಿಶ್ರಾಂತ ಪ್ರಾಚಾರ್ಯರು-ಅಧ್ಯಾಪಕರ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯರಾದ ಡಾ. ಗಾಯತ್ರಿದೇವಿ ಸಜ್ಜನ್ ಭಾಗವಹಿಸಿ ಮಾತನಾಡಿದರು. ಗುರು ಮತ್ತು ಶಿಷ್ಯರ ಪರಂಪರೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಪ್ರಸ್ತುತ ದಿನಗಳಲ್ಲಿ ಜ್ಞಾನದ ಹರಿವು ಹಲವು ಮಾರ್ಗಗಳಲ್ಲಿ ಲಭ್ಯವಿದ್ದು, ಅದನ್ನು ಅರಿತು ಶಿಕ್ಷಕರು ವಿದ್ಯಾರ್ಥಿಗಳ ಹಿನ್ನೆಲೆ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಪಾಠ ಮಾಡಬೇಕಾಗಿದೆ. ಅಧ್ಯಾಪಕರಲ್ಲಿ ಶಿಸ್ತು, ಶ್ರದ್ಧೆ ಮತ್ತು ಅಧ್ಯಯನಶೀಲ ಮನೋವೃತ್ತಿ ಇದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮತ್ತೊಬ್ಬ ವಿಶ್ರಾಂತ ಪ್ರಾಚಾರ್ಯ ಪ್ರೊ. ಟಿ.ಎಸ್. ಹೂವಯ್ಯಗೌಡ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಶಿಸ್ತು ಮತ್ತು ವೃತ್ತಿಪರತೆಯಿಂದ ಕೂಡಿದ ಜೀವನಗಾಥೆಯೇ ಸಾರ್ವಕಾಲಿಕ ಸ್ಫೂರ್ತಿಯಾಗಿದೆ. ಶಿಕ್ಷಕರ ದಿನಾಚರಣೆಯು ಕೇವಲ ಆಚರಣೆಯಾಗದೆ ಅರ್ಥಪೂರ್ಣವಾಗಿರಬೇಕು ಎಂದು ಕರೆ ನೀಡಿದರು.

ಕಾಲೇಜು ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ನೆರವು ಅಗತ್ಯ: ಐತಿಹಾಸಿಕ ಹಿನ್ನೆಲೆಯುಳ್ಳ ಸಹ್ಯಾದ್ರಿ ವಿಜ್ಞಾನ ಕಾಲೇಜು ಸ್ವಾಯತ್ತತೆ ಹೊಂದಿದ್ದರೂ ಮೂಲಸೌಕರ್ಯ ಹಾಗೂ ತಾಂತ್ರಿಕತೆಯ ದೃಷ್ಟಿಯಿಂದ ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಎ.ಎಸ್. ಚಂದ್ರಶೇಖರ್ ಹೇಳಿದರು. ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ನೆರವು ಪಡೆಯಬೇಕು ಹಾಗೂ ಸಿಎಸ್‌ಆರ್ (CSR) ಫಂಡ್ ತರಲು ಸಮಿತಿ ರಚಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಜಯದೇವಪ್ಪ, ಪ್ರೊ. ಶಕುಂತಲಾ, ಪ್ರೊ. ವಾಗ್ದೇವಿ ಹಾಗೂ ಉಸ್ತುವಾರಿ ಪ್ರಾಚಾರ್ಯ ಪ್ರೊ. ಕೃಷ್ಣಸ್ವಾಮಿ ಉಪಸ್ಥಿತರಿದ್ದರು. ಬಾಗಲಕೋಟೆ ವಿವಿ ಪರೀಕ್ಷಾಂಗ ಕುಲಸಚಿವೆ ಡಾ. ಲತಾ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿಗಳ ಸಂಘದ ನಿರ್ದೇಶಕ ನಾಗರಾಜ್ ನೇರಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಾಗರಾಜ್ ಪರಿಸರ ಕಾರ್ಯಕ್ರಮ ನಿರೂಪಿಸಿ, ಜೇಸುದಾಸ್ ಪಿ. ವಂದಿಸಿದರು.
ಹಿರಿ-ಕಿರಿಯರ ಅಪರೂಪದ ಸಮ್ಮಿಲನ: ಈ ಬಾರಿಯ ಶಿಕ್ಷಕರ ದಿನಾಚರಣೆಯು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಅತ್ಯಂತ ವಿಶೇಷವಾಗಿ ಜರುಗಿತು. ದಶಕಗಳ ಹಿಂದೆ ನಿವೃತ್ತರಾದ ವಿಶ್ರಾಂತ ಪ್ರಾಚಾರ್ಯರು, ಅಧ್ಯಾಪಕರು, ಹಾಲಿ ಶಿಕ್ಷಕರು ಹಾಗೂ ಹಿರಿಯ-ಕಿರಿಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಒಂದಾಗಿ ಗುರುಗಳ ಆಶೀರ್ವಾದ ಪಡೆದ ಅಪರೂಪದ ಕ್ಷಣಕ್ಕೆ ಕಾಲೇಜು ಸಾಕ್ಷಿಯಾಯಿತು.



More Stories
ಆಶ್ರಯ ಮನೆ ವಿಳಂಬ: ಪಾಲಿಕೆಗೆ ಮುತ್ತಿಗೆ, ಈಶ್ವರಪ್ಪ ಪೊಲೀಸ್ ವಶಕ್ಕೆ
ಕೋಣಂದೂರು ರೋಟರಿಯಿಂದ ಉಚಿತ ಶ್ರವಣ ತಪಾಸಣೆ: 5 ಜನರಿಗೆ ಶ್ರವಣ ಯಂತ್ರ
ರೇಡಿಯೋ ಶಿವಮೊಗ್ಗ 90.8 FM: ರಾಜ್ಯೋತ್ಸವಕ್ಕೆ 24 ಗಂಟೆ ನೇರಪ್ರಸಾರ