ಶಿವಮೊಗ್ಗ, ಸೆ.05: ಶಿವಮೊಗ್ಗ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿದ್ದು, ಇಲ್ಲಿನ ಸಾರ್ವಜನಿಕರ ಸಹೃದಯತೆ ಹಾಗೂ ಸ್ನೇಹ ವಿಶ್ವಾಸಗಳಿಗೆ ಮನಸೋತಿದ್ದೇನೆ. ದೊಡ್ಡ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ವೈದ್ಯ ಮತ್ತು ರೋಗಿಯ ನಡುವಿನ ಬಾಂಧವ್ಯ ಯಾಂತ್ರಿಕವಾಗಿರುತ್ತದೆ. ಆದರೆ ಸ್ಥಳೀಯ ಆಸ್ಪತ್ರೆಗಳು ಹೆಚ್ಚು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವುದರಿಂದ ರೋಗಿಗಳೊಂದಿಗೆ ಸಂವೇದನಾಶೀಲ ಸಂಬಂಧ ಸ್ಥಾಪಿತವಾಗುತ್ತದೆ ಎಂದು ಶಿವಮೊಗ್ಗದ ‘ಜನನಿ ನ್ಯೂ ಲೈಫ್’ ತಾಯಿ-ಮಕ್ಕಳ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ. ಸಿ.ಜಿ. ರಾಘವೇಂದ್ರ ವೈಲಾಯ ಹೇಳಿದರು.
ಜನನಿ ನ್ಯೂ ಲೈಫ್ ಆಸ್ಪತ್ರೆಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಸ್ಪತ್ರೆಯ ಆರಂಭದಿಂದಲೂ ಗುಣಮಟ್ಟದ ಚಿಕಿತ್ಸೆಯ ಫಲವಾಗಿ ತಾಯಿ ಮತ್ತು ನವಜಾತ ಶಿಶುಗಳ ಆರೈಕೆಯಲ್ಲಿ ನೂರಕ್ಕೆ ನೂರರಷ್ಟು ಪೂರ್ಣ ಫಲಿತಾಂಶ ದೊರೆತಿದೆ. ದಿನೇದಿನೆ ಗರ್ಭಿಣಿಯರ ಉಪಚಾರ, ಸುರಕ್ಷಿತ ಹೆರಿಗೆ ನಿರ್ವಹಣೆ ಹಾಗೂ ತಾಯ್ತನದ ಕುರಿತು ಜಾಗೃತಿ ಮೂಡಿಸುವ ಸೇವೆ ನೀಡಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ವಾಣಿಜ್ಯ ದೃಷ್ಟಿಯಿಲ್ಲದೆ ಮಾನವೀಯತೆಯಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸಣ್ಣ ಹಾಗೂ ಸ್ಥಳೀಯ ಆಸ್ಪತ್ರೆಗಳನ್ನು ಸಮಾಜ ಪೋಷಿಸಿ ಬೆಳೆಸಬೇಕಿದ್ದು, ಈ ನಿಟ್ಟಿನಲ್ಲಿ ಮಾಧ್ಯಮಗಳ ಸಹಕಾರ ಅಗತ್ಯ ಎಂದು ಅವರು ಕೋರಿದರು.
ಇಂದು ‘ಖಾರ ಬಾತ್’ ಪುಸ್ತಕ ಲೋಕಾರ್ಪಣೆ:
ಆಸ್ಪತ್ರೆಯ ನಾಲ್ಕನೇ ವಾರ್ಷಿಕೋತ್ಸವದ ನೆನಪಿಗಾಗಿ ಡಾ. ರಾಘವೇಂದ್ರ ವೈಲಾಯ ಅವರು ಬರೆದಿರುವ “ಖಾರ ಬಾತ್” ಪುಸ್ತಕವು ಸೆಪ್ಟೆಂಬರ್ 5ರ ಶನಿವಾರ ಸಂಜೆ 5:30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಶಿವಮೊಗ್ಗದ ತಿಲಕ್ ನಗರದಲ್ಲಿರುವ ಸನ್ ಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ.
ಕಾರ್ಯಕ್ರಮವನ್ನು ಡಾ. ಆಕಾಶ್ ಹೊಸತೋಟ ಉದ್ಘಾಟಿಸಲಿದ್ದು, ಪ್ರಸಿದ್ಧ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಯು. ವೈದ್ಯನಾಥ್ ಪುಸ್ತಕ ಪರಿಚಯಿಸಲಿದ್ದು, ಜಿ.ಎಸ್. ನಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಶಾಖೆಯ ಅಧ್ಯಕ್ಷ ಡಾ. ಸುಧೀಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜನನಿ ನ್ಯೂ ಲೈಫ್ ಆಸ್ಪತ್ರೆಯ ಸಿಇಓ ಡಾ. ಶುಭಾ ವೈಲಾಯ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಕ್ಷಿಣ ವಿಭಾಗದ ಖಜಾಂಚಿ ಕೆ.ಜಿ. ಮಂಜುನಾಥ ಶರ್ಮ ಉಪಸ್ಥಿತರಿದ್ದರು.
On the occasion of the 4th anniversary of Janani New Life Mother and Child Hospital in Shivamogga, Neonatologist Dr. C.G. Raghavendra Vailaya emphasized that local hospitals offer more empathetic and patient-friendly care compared to corporate hospitals. He also announced the release of his new book ‘Khara Bath’ scheduled for Saturday evening in Shivamogga.



More Stories
ಸಾಗರ: ಡಾ. ಜಿ.ಎ. ನಾರಿ ಬೋಲಿ ಕಾಲೇಜಿನಲ್ಲಿ ‘ಯುವ ಮನಸ್ಸುಗಳಲ್ಲಿ ಕೃಷಿ ಚಿಂತನೆ’ ಸಂವಾದ ಕಾರ್ಯಕ್ರಮ
ಶಿವಮೊಗ್ಗ: ಡಾ. ಶರತ್ ಮರಿಯಪ್ಪ ಫೌಂಡೇಶನ್ನಿಂದ ಉಚಿತ ‘ಉದ್ಯೋಗ ಪಥ’ ತರಬೇತಿ; ಸೆ.10ಕ್ಕೆ ಚಾಲನೆ
ಅಧ್ಯಯನಶೀಲ ಶಿಕ್ಷಕರಿಂದ ಮಾತ್ರ ಉತ್ತಮ ಶಿಷ್ಯರ ಸೃಷ್ಟಿ ಸಾಧ್ಯ – ಡಾ. ಗಾಯತ್ರಿದೇವಿ ಸಜ್ಜನ್