ತೀರ್ಥಹಳ್ಳಿ, ಸೆ.05: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹೊಸನಗರ ಹಾಗೂ ಸಾಗರದಲ್ಲಿ ಹೋರಾಟ ನಡೆಸಿದ ಬಳಿಕ ಇದೀಗ ತೀರ್ಥಹಳ್ಳಿಯಲ್ಲೂ ಬೃಹತ್ ಪಾದಯಾತ್ರೆ ನಡೆಸಲಾಗಿದೆ. ಸಹಕಾರಿ ಕ್ಷೇತ್ರದ ನೇತೃತ್ವದಲ್ಲಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಶರಾವತಿ ಸಂತ್ರಸ್ತರು ಸೇರಿದಂತೆ ಇಲ್ಲಿನ ರೈತರು ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆ, ಶಾಲೆ, ಆಸ್ಪತ್ರೆ ಹಾಗೂ ದೇವಸ್ಥಾನಗಳ ಮೇಲೆ ತೀವ್ರ ಪರಿಣಾಮ ಬೀರುವ ಆತಂಕವಿದೆ ಎಂದರು.
ಕೇಂದ್ರ ಮತ್ತು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ: ಕಸ್ತೂರಿ ರಂಗನ್ ವರದಿ ಕುರಿತು ರೈತರ ಪರವಾಗಿ ಸಮರ್ಪಕವಾಗಿ ಧ್ವನಿ ಎತ್ತುವ ಕೆಲಸವಾಗಿಲ್ಲ ಎಂದು ಆರೋಪಿಸಿದ ಬೇಳೂರು, ಏಳು ಕರಡು ಅಧಿಸೂಚನೆಗಳು ಬಂದಿದ್ದರೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆದ ಚರ್ಚೆಗಳಲ್ಲಿ ಬಿಜೆಪಿ ಸಂಸದರು ಭಾಗವಹಿಸಿಲ್ಲ ಎಂದು ಟೀಕಿಸಿದರು. ಸಭೆಗಳಿಗೆ ಕರೆದರೂ ಒಬ್ಬರೂ ಭಾಗವಹಿಸಿಲ್ಲ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದರು.
ವಿಶೇಷ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಸೆಪ್ಟೆಂಬರ್ 21, 22 ಮತ್ತು 23ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ಕರಡು ಅಧಿಸೂಚನೆ ರದ್ದುಪಡಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕರಡು ಅಧಿಸೂಚನೆ ರದ್ದಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯ ಜನರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ವೆಬ್‌ಸೈಟ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿಜಯೇಂದ್ರ ವಿರುದ್ಧ ವಾಗ್ದಾಳಿ ಹಾಗೂ ಬಾವಿ ವಿವಾದ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಬೇಳೂರು, ತಮ್ಮ ವಿರುದ್ಧ ಕೇಳಿಬಂದ ಬಾವಿ ವಿವಾದಕ್ಕೂ ಸ್ಪಷ್ಟನೆ ನೀಡಿದರು. ಸಾಗರದಲ್ಲಿ ಇಬ್ಬರು ವ್ಯಕ್ತಿಗಳು ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯರ ಮನವಿಯಂತೆ ಹರಾಜಿನಲ್ಲಿ ಪಡೆದ ಬಾವಿಯನ್ನು ಮುಚ್ಚಲಾಗಿದೆ. ರೈತರಿಗಾಗಿ ತಾವು ಮತ್ತೊಂದು ಬಾವಿ ಮಾಡಿಸಿಕೊಟ್ಟಿರುವುದಾಗಿ ತಿಳಿಸಿದ ಅವರು, ವಿಷಯಗಳಿಲ್ಲದೆ ಮಾಜಿ ಶಾಸಕರು ಹಾಗೂ ವಿಜಯೇಂದ್ರ ಬಾವಿ ವಿಚಾರ ಹಿಡಿದುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.



More Stories
ಶಿವಮೊಗ್ಗ: ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ, ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವ ಭರವಸೆ – ಎಚ್.ಯು. ವೈದ್ಯನಾಥ
ತೀರ್ಥಹಳ್ಳಿಯ ಶ್ರೀ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದಲ್ಲಿ ದಾಖಲೆಯ ಹುಂಡಿ ಸಂಗ್ರಹ: ₹1.01 ಕೋಟಿ ನಗದು, ಆಭರಣ ಕಾಣಿಕೆ
ಪತ್ರಿಕಾ ವಿತರಕರ ದಿನಾಚರಣೆ ಸೆ. 4ರಂದು