AI-Vartha.in

ನಿಖರ ಸುದ್ದಿ, ನೇರ ವರದಿ

ಶಿಕಾರಿಪುರ: ಕೆರೆಗೆ ಉರುಳಿದ ಕಾರು; ಪೊಲೀಸ್ ಕಾನ್‌ಸ್ಟೇಬಲ್ ಪ್ರಾಣ ರಕ್ಷಿಸಿದ ಅಲ್ತಾಫ್

ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 11: ಶಿರಾಳಕೊಪ್ಪದಿಂದ ಸೊರಬಕ್ಕೆ ತೆರಳುತ್ತಿದ್ದಾಗ ಛತ್ರದಹಳ್ಳಿ ಬಳಿ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಅವರನ್ನು ಯುವಕನೊಬ್ಬ ಸಮಯಪ್ರಜ್ಞೆ ಮೆರೆದು ಸಾಹಸಪೂರ್ವಕವಾಗಿ ರಕ್ಷಿಸಿದ್ದಾನೆ.

ಅಪಘಾತದಲ್ಲಿ ಸೊರಬ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಎಸ್. ಕೊಟ್ರೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ.

ಯುವಕನ ಸಮಯಪ್ರಜ್ಞೆ ಹಾಗೂ ಸಾಹಸ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಿಕಾರಿಪುರದ ಗಗ್ರಿ ನಿವಾಸಿ ಅಲ್ತಾಫ್ ಎಂಬುವವರು ತಕ್ಷಣವೇ ಕೆರೆಯ ನೀರಿಗೆ ಧುಮುಕಿದ್ದಾರೆ. ನೀರಿನಲ್ಲಿ ತಲೆಕೆಳಗಾಗಿ ಬಿದ್ದಿದ್ದ ಕಾರಿನ ಬಾಗಿಲನ್ನು ತೆಗೆದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾನ್‌ಸ್ಟೇಬಲ್ ಎಸ್. ಕೊಟ್ರೇಶ್ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬಳಿಕ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪ್ರಶಸ್ತಿಗೆ ಒತ್ತಾಯ ತಮ್ಮ ಜೀವದ ಹಂಗು ತೊರೆದು ಸಮಯಪ್ರಜ್ಞೆಯಿಂದ ಮಾನವೀಯತೆ ಮೆರೆದ ಅಲ್ತಾಫ್ ಅವರ ಸಾಹಸವನ್ನು ಗುರುತಿಸಿ ಸರ್ಕಾರ ಅವರಿಗೆ ಸೂಕ್ತ ಪ್ರಶಸ್ತಿ ಹಾಗೂ ಗೌರವ ನೀಡಬೇಕು ಎಂದು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ. ಚಿನ್ನಪ್ಪ ಒತ್ತಾಯಿಸಿದ್ದಾರೆ.