ಶಿವಮೊಗ್ಗ: ಸಂಗೀತದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಕುಮಾರಿ ಆದ್ಯ ಹೇಳಿದರು.
ನಗರದ ರಾಜೇಂದ್ರನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ ತಿಂಗಳ ಕುಟುಂಬ ಸಮ್ಮಿಲನ ಸಭೆಯಲ್ಲಿ “ಸವಿನೆನಪು ಮೆಲ್ಲುಸಿರೇ ಸವಿಗಾನ – ಹಳೆಯ ಕನ್ನಡ ಚಿತ್ರಗೀತೆಗಳು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗಾಯಕರಾಗುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಹಾಗೂ ಬದ್ಧತೆ ಅಗತ್ಯ. ಗಾಯನ ಕ್ಷೇತ್ರಕ್ಕೆ ಬರಲು ಬಯಸುವವರು ಹಾಗೂ ಈಗಾಗಲೇ ಈ ಕ್ಷೇತ್ರದಲ್ಲಿರುವವರು ತಮ್ಮ ಕಂಠದ ಆರೈಕೆಗೆ ವಿಶೇಷ ಗಮನ ನೀಡಬೇಕು ಎಂದು ಕುಮಾರಿ ಆದ್ಯ ಸಲಹೆ ನೀಡಿದರು.
ಎಸ್. ಜಾನಕಿ ಕೊಡುಗೆ ಸ್ಮರಿಸಿದ ಆದ್ಯ
ಚಲನಚಿತ್ರ ಸಂಗೀತದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ ಅವರು, ಗಾನಕೋಗಿಲೆ ಎಸ್. ಜಾನಕಿ ಅವರ ಸಾಧನೆಯನ್ನು ಸ್ಮರಿಸಿದರು.
ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್. ಜಾನಕಿ ಅವರು ಪ್ರತಿಯೊಂದು ಭಾಷೆಯ ಭಾವವನ್ನು ಅರ್ಥಮಾಡಿಕೊಂಡು ಗಾಯನ ಮಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಕನ್ನಡ ನಾಡು ಮತ್ತು ಭಾಷೆಗೆ ಅವರು ನೀಡಿರುವ ಕೊಡುಗೆಯನ್ನು ಕನ್ನಡಿಗರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಯುವಪೀಳಿಗೆಗೆ ಮಹನೀಯರ ಪರಿಚಯ ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಹಾಗೂ ಸುದ್ದಿವಾಹಿನಿಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದರು.
ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ. ರಾಜಕುಮಾರ್, ಕುವೆಂಪು ಸೇರಿದಂತೆ ಅನೇಕ ಮಹನೀಯರ ಸಾಧನೆ ಮತ್ತು ಕೊಡುಗೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ. ವಿಜಯ್ ಕುಮಾರ್ ಮಾತನಾಡಿ, ಕಲೆ ಸಾಧಕನ ಅಮೂಲ್ಯ ಸ್ವತ್ತಾಗಿದ್ದು, ಅದನ್ನು ಬೆಳೆಸಲು ಪರಿಶ್ರಮ ಅತ್ಯಗತ್ಯ. ಸಂಗೀತವು ದೈವದತ್ತ ಕಲೆಯಾಗಿದ್ದು, ಎಲ್ಲರನ್ನೂ ಆಕರ್ಷಿಸುವ ಶಕ್ತಿ ಹೊಂದಿದೆ. ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುವ ಸಾಮರ್ಥ್ಯವೂ ಸಂಗೀತಕ್ಕಿದೆ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ನಾಡು, ನುಡಿ ಹಾಗೂ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಹಳೆಯ ಕನ್ನಡ ಗೀತೆಗಳ ಗಾಯನ
ಕಾರ್ಯಕ್ರಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಕುಮಾರಿ ಆದ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಅವರು ಹಳೆಯ ಕನ್ನಡ ಚಿತ್ರಗೀತೆಗಳು, ಭಾವಗೀತೆಗಳು ಹಾಗೂ ನವೀನ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ಕ್ಲಬ್ ಕಾರ್ಯದರ್ಶಿ ಆರ್. ಮನೋಹರ, ಮಾಜಿ ಅಧ್ಯಕ್ಷರಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಡಾ. ಪರಮೇಶ್ವರ್ ಶಿಗ್ಗಾವ್, ಕೃಷ್ಣಮೂರ್ತಿ, ಬಿ. ಸತೀಶ್ ಚಂದ್ರ, ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಬಿ.ಆರ್. ಧನಂಜಯ್, ರಘುರಾಜ್ ಎಚ್.ಕೆ., ಡಾ. ರವಿಕಿರಣ್ ಎಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್, ಕಾಸಲ ವಿ. ಸುರೇಂದ್ರ, ಸಂತೋಷ್ ಕುಮಾರ್ ಬಿ.ಎನ್., ಸಂಜೀವ್ ಎಸ್.ಎನ್., ಅಜಿತ್ ಎಚ್.ಎಸ್., ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಜಗದೀಶ್, ಗುರುಮೂರ್ತಿ ಸೇರಿದಂತೆ ಅನೇಕ ಪದಾಧಿಕಾರಿಗಳು, ರೊಟೇರಿಯನ್ಸ್, ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್, ವೀಣಾ ಕಿಶೋರ್ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.



More Stories
ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡದಿದ್ದರೆ ಕಸಾಯಿಖಾನೆಗಳ ಎದುರೇ ಧರಣಿ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ
ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ನಿಂದ ಕ್ಯಾನ್ಸರ್ ಜಾಗೃತಿ ಅಭಿಯಾನ
ಪಿಎಂ ಇ-ಬಸ್ ಸೇವಾ ಯೋಜನೆಯಡಿ ಶೀಘ್ರವೇ ರಸ್ತೆಗಿಳಿಯಲಿವೆ 50 ಎಲೆಕ್ಟ್ರಿಕ್ ಬಸ್ಗಳು