ಶಿವಮೊಗ್ಗ: ಕಣ್ಣುಗಳನ್ನು ದಾನ ಮಾಡುವ ಮೂಲಕ ದೃಷ್ಟಿಹೀನರ ಬದುಕಿಗೆ ಬೆಳಕು ನೀಡಬಹುದು. ಪ್ರತಿಯೊಬ್ಬರೂ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿ, ಇತರರ ಬಾಳಿಗೆ ಬೆಳಕಾಗಬೇಕು ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಕರೆ ನೀಡಿದರು.
ನಗರದ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 8, 2026ರವರೆಗೆ ನಡೆಯಲಿರುವ ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆ ಹಾಗೂ ನೇತ್ರದಾನ ಉಯಿಲು ಪತ್ರ ಸಂಗ್ರಹ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರಲ್ಲಿ ನೇತ್ರದಾನದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷರು ಪ್ರಾಸ್ತಾವಿಕವಾಗಿ ತಿಳಿಸಿದರು.
ದೇಶದಲ್ಲಿ ಲಕ್ಷಾಂತರ ಮಂದಿ ಕಾರ್ನಿಯಾ ದೋಷದಿಂದ ದೃಷ್ಟಿಹೀನರಾಗಿದ್ದು, ನೇತ್ರದಾನದ ಮೂಲಕ ಅವರಿಗೆ ಹೊಸ ಬದುಕು ನೀಡಲು ಸಾಧ್ಯವಿದೆ. ವ್ಯಕ್ತಿ ಮೃತಪಟ್ಟ ಆರು ಗಂಟೆಗಳೊಳಗೆ ಕಣ್ಣುಗಳನ್ನು ಸಂಗ್ರಹಿಸಬಹುದಾಗಿದೆ. ವಯಸ್ಸು, ಲಿಂಗ ಅಥವಾ ಹಲವು ಕಾಯಿಲೆಗಳಿದ್ದರೂ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಬಹುದು ಎಂದು ಅವರು ಹೇಳಿದರು.
ನೇತ್ರದಾನದಿಂದ ಅಂತ್ಯಕ್ರಿಯೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಹಾಗೂ ದಾನಿಯ ಮುಖ ವಿರೂಪಗೊಳ್ಳುವುದಿಲ್ಲ. ಈ ಕುರಿತು ಜನರಲ್ಲಿ ಇರುವ ತಪ್ಪು ನಂಬಿಕೆಗಳನ್ನು ದೂರ ಮಾಡಬೇಕಿದೆ ಎಂದು ತಿಳಿಸಿದರು.
ಮರಣ ಸಂಭವಿಸಿದ ತಕ್ಷಣ ಕುಟುಂಬಸ್ಥರು ಸಂಬಂಧಪಟ್ಟ ನೇತ್ರ ಭಂಡಾರಕ್ಕೆ ಮಾಹಿತಿ ನೀಡಬೇಕು. ತರಬೇತಿ ಪಡೆದ ತಜ್ಞರು ನೇತ್ರ ಸಂಗ್ರಹಣೆಯ ಪ್ರಕ್ರಿಯೆ ನಡೆಸಲಿದ್ದು, ನೇತ್ರದಾನ ಉಯಿಲು ಪತ್ರಗಳು ಫ್ರೆಂಡ್ಸ್ ಸೆಂಟರ್‌ನ ಸಂಗ್ರಹ ಕೇಂದ್ರದಲ್ಲಿ ಪ್ರತಿದಿನ ಲಭ್ಯವಿರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರ್ ಮಾತನಾಡಿ, ನೇತ್ರದಾನವು ಸಾಮಾಜಿಕ ಕಳಕಳಿ ಮತ್ತು ಮಾನವೀಯತೆಯ ಪ್ರತೀಕವಾಗಿದೆ. ಅಂಧತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
“ಮನುಷ್ಯ ಸತ್ತ ನಂತರ ದೇಹದ ಜೊತೆಗೆ ಕಣ್ಣುಗಳೂ ಮಣ್ಣಿನಲ್ಲಿ ಮಣ್ಣಾಗುವ ಬದಲು, ಅವು ಮತ್ತೊಬ್ಬರ ಬಾಳಿಗೆ ಬೆಳಕಾಗಲಿ. ನಮ್ಮ ಕಣ್ಣುಗಳು ನಮ್ಮೊಂದಿಗೆ ಕೊನೆಗೊಳ್ಳದಂತೆ ನೇತ್ರದಾನದ ಮೂಲಕ ಇತರರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸೋಣ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಪಿ. ನಂದೀಶ್ ಅವರು ನೇತ್ರದಾನ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದರು. ನೇತ್ರದಾನದ ಕುರಿತು ನೇತ್ರ ತಜ್ಞರಾದ ಡಾ. ಅಶೋಕ್ ಹಾಗೂ ಡಾ. ದೀಪಾ ಮೇಘರಾಜ್ ಮಾಹಿತಿ ನೀಡಿದರು.
ಲೋಕೇಶಪ್ಪ ಸ್ವಾಗತಿಸಿದರು. ಮೋಹನ್ ಕುಮಾರ್ ವಂದಿಸಿದರು. ಮಾಜಿ ಸಹಾಯಕ ಗವರ್ನರ್ ರೋ. ಜಿ. ವಿಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಧನರಾಜ್, ರವೀಂದ್ರನಾಥ ಐತಾಳ್, ಮಹಿಳಾ ಅಧ್ಯಕ್ಷೆ ಸುನಿತಾ ಚೇತನ್, ಎಂ.ಎನ್. ವೆಂಕಟೇಶ್, ಪಂಚಾಕ್ಷರಯ್ಯ ಹಿರೇಮಠ್, ಮನೋಹರ್, ರಾಜೇಶ್, ರವಿ, ನಾಗರಾಜ್, ದತ್ತಾತ್ರಿ ಎಸ್. ಮಹೇಶ್ವರಪ್ಪ, ಮೋಹನ್ ಡಿ.ಪಿ., ಸತ್ಯನಾರಾಯಣ ಜಿ. ಸೇರಿದಂತೆ ಫ್ರೆಂಡ್ಸ್ ಸೆಂಟರ್ ಸದಸ್ಯರು ಉಪಸ್ಥಿತರಿದ್ದರು.
Shivamogga launched a National Eye Donation Fortnight programme and an eye donation pledge collection centre to create awareness about eye donation and help restore vision among the visually impaired.



More Stories
ಶಿವಮೊಗ್ಗದ ಪ್ರತ್ಯಂಗಿರಾ ದೇವಿ ಆಶ್ರಮದ ಬಳಿ ಕುಟುಂಬ ಕಲಹ: ಆಸ್ತಿ ಪಾಲಿಗಾಗಿ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆ–ಸಹಾಯಕಿಯರ ಹುದ್ದೆ: ಅರ್ಜಿ ಸಲ್ಲಿಕೆ ಅವಧಿ ಸೆ. 5ರವರೆಗೆ ವಿಸ್ತರಣೆ
ಶಿವಮೊಗ್ಗದಲ್ಲಿ ಹಿರಿಯ ನಾಗರಿಕರೊಂದಿಗೆ ಆತ್ಮೀಯ ಸಂವಾದ: ಇನ್ನರ್ ವೀಲ್ ಕ್ಲಬ್ನ ವಿನೂತನ ಕಾರ್ಯಕ್ರಮ